Home District Siddu V/S HDD | ತಮ್ಮ ಪ್ರಾಬಲ್ಯ ಉಳಿಸಿಕೊಳ್ಳಲು ದೇವೇಗೌಡರು-ಸಿದ್ದರಾಮಯ್ಯರಿಂದ ಅಸ್ತ್ರ-ಪ್ರತ್ಯಾಸ್ತ್ರ.?! ರಾಜ್ಯ ರಾಜಕಾರಣದ ಗುರು-ಶಿಷ್ಯರ...

Siddu V/S HDD | ತಮ್ಮ ಪ್ರಾಬಲ್ಯ ಉಳಿಸಿಕೊಳ್ಳಲು ದೇವೇಗೌಡರು-ಸಿದ್ದರಾಮಯ್ಯರಿಂದ ಅಸ್ತ್ರ-ಪ್ರತ್ಯಾಸ್ತ್ರ.?! ರಾಜ್ಯ ರಾಜಕಾರಣದ ಗುರು-ಶಿಷ್ಯರ ಏಟಿಗೆ ಎದಿರೇಟು…

258
0
SHARE

ರಾಜ್ಯ ರಾಜಕಾರಣದ ದಿಗ್ಗಜರಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ಸಿದ್ದರಾಮಯ್ಯ ಅವರು ಲೋಕಸಭೆ ಚುನಾವಣೆ ಸೀಟು ಹಂಚಿಕೆಯಲ್ಲಿ ತಮ್ಮ ಪ್ರಾಬಲ್ಯ ಉಳಿಸಿಕೊಳ್ಳಲು ಒಂದೊಂದೇ “ದಾಳ’ ಉರುಳಿಸುತ್ತಿದ್ದಾರೆ.

ಇಬ್ಬರಿಗೂ ಮೈತ್ರಿಯ ಜತೆ ಜತೆಗೆ ತಂತಮ್ಮ ನೆಲೆಗಳನ್ನು ಭದ್ರಪಡಿಸಿಕೊಳ್ಳುವ ಹವಣಿಕೆ. ಹೀಗಾಗಿ ಇಬ್ಬರೂ ಅಸ್ತ್ರ -ಪ್ರತ್ಯಸ್ತ್ರಗಳನ್ನು ಬಿಡುತ್ತ ಲೇ ಇದ್ದಾರೆ. ಹೀಗಾಗಿ, ಮೈತ್ರಿಗಳ ನಡುವಿನ ಸೀಟು ಹೊಂದಾಣಿಕೆ ವಿಳಂಬವಾಗುತ್ತಲೇ ಇದೆ. ಒಂದೆಡೆ ಸೀಟು ಹಂಚಿಕೆಯಲ್ಲಿ ಹಾಸನ, ಮಂಡ್ಯ, ಶಿವಮೊಗ್ಗ ಜತೆಗೆ ತುಮಕೂರು ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು ಉತ್ತರ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ದೇವೇಗೌಡರು ಪ್ರಭಾವ ಹೆಚ್ಚಿಸಿಕೊಂಡು ಜೆಡಿಎಸ್‌ಗೆ ಭದ್ರ ನೆಲೆ ಕಲ್ಪಿಸಲು ಪಟ್ಟು ಹಾಕುತ್ತಿದ್ದಾರೆ.

ದೇವೇಗೌಡರಂತೆ ಪಳಗಿರುವ ಸಿದ್ದರಾಮಯ್ಯ ತಮ್ಮ ಪ್ರಾಬಲ್ಯ ಉಳಿಸಿಕೊಳ್ಳಲು ಭವಿಷ್ಯದಲ್ಲಿ ಕಾಂಗ್ರೆಸ್‌ನಲ್ಲಿ ಹಿಡಿತಕ್ಕೆ “ಅಸ್ತ್ರ ‘ ಪ್ರಯೋಗಿಸುತ್ತಿದ್ದಾರೆ.ಒಂದೆಡೆ ಮಂಡ್ಯ-ಹಾಸನ ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದೇವೆ. ಬೆಂಗಳೂರು ಉತ್ತರ ಬೇಕಾದರೂ ಸರಿ. ತುಮಕೂರು-ಚಿಕ್ಕಬಳ್ಳಾಪುರ ಸಾಧ್ಯವಿಲ್ಲ ಎಂಬ ಗಟ್ಟಿ ಧ್ವನಿ ಕಾಂಗ್ರೆಸ್‌ ನಲ್ಲಿ ಮೊಳಗುತ್ತಿರುವುದು. ಮೈಸೂರು ಕ್ಷೇತ್ರದ ವಿಚಾರದಲ್ಲಂತೂ ಕಡ್ಡಿ ತುಂಡಾದಂತೆ ಸ್ಕ್ರೀನಿಂಗ್‌ ಕಮಿಟಿ ಸಭೆಯಲ್ಲೇ ಸಿದ್ದರಾಮಯ್ಯ ಮಾತನಾಡಿರುವುದು ನೋಡಿದರೆ ಲೋಕಸಭೆ ಚುನಾವಣೆ ನೆಪ ಮಾತ್ರ.

ಭವಿಷ್ಯದ ರಾಜಕಾರಣ ದೂರಾಲೋಚನೆ ಇರುವುದು ಕಂಡುಬರುತ್ತದೆ.ಕಾಂಗ್ರೆಸ್‌-ಜೆಡಿಎಸ್‌ ಸೇರಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದರೂ ಮುಂದೆ ಇದೇ ರೀತಿಯ ಪರಿಸ್ಥಿತಿ ಇರುತ್ತದೆ ಎಂದು ಹೇಳಲು ಸಾಧ್ಯ ವಿಲ್ಲ. ಈಗ ಪಕ್ಷದ ಅಸ್ತಿತ್ವ ಕಳೆದುಕೊಂಡರೆ ಮತ್ತೆ ಪಕ್ಷ ಬೆಳೆಸಬೇಕಾದರೆ ವರ್ಷಗಳು ಬೇಕಾಗುತ್ತದೆ ಎಂಬ ವಾದ ಮುಂದಿಟ್ಟುಕೊಂಡು ಅದಕ್ಕೆ ಮೂಲ ಕಾಂಗ್ರೆಸ್ಸಿಗರ ಬೆಂಬಲವನ್ನು ಪಡೆದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯತಂತ್ರ ಹಣೆದಿದ್ದಾರೆ. ಇದೇ ಕಾರಣಕ್ಕೆಹೈಕಮಾಂಡ್‌ಗೂ ಸೀಟು ಹಂಚಿಕೆ ಕಗ್ಗಂಟಾಗಿದೆ.

ಆದರೆ, ಸಿದ್ದರಾಮಯ್ಯ ಅವರನ್ನೂ ಚೆನ್ನಾಗಿಯೇ ಬಲ್ಲ ಎಚ್‌ .ಡಿ.ದೇವೇಗೌಡರು ಮೊದಲಿಗೆ ಮೈಸೂರು ಕ್ಷೇತ್ರಕ್ಕೆ ಬೇಡಿಕೆ ಇಡುವ ಮೂಲಕ ಪ್ರತಿತಂತ್ರವನ್ನೇ ಹಣೆದಿದ್ದಾರೆ. ದೇವೇಗೌಡರು ಸ್ಪರ್ಧೆ ಮಾಡುವ ಕ್ಷೇತ್ರ ಯಾವುದೇ ಆಗಿರಲಿ ಕಾಂಗ್ರೆಸ್‌ ಗೆದ್ದಿದ್ದರೂ ಅವರು ಬಯಸಿದರೆ ಬಿಟ್ಟುಕೊಡಬೇಕು. ಆ ಬಗ್ಗೆ ಯಾರೂ ತಕರಾರು ತೆಗೆಯಬಾರದು ಎಂದು ಕಾಂಗ್ರೆಸ್‌ಹೈಕಮಾಂಡ್‌ ಹೇಳಿತ್ತು. ಆ ರೀತಿ ಹೇಳುವ ಸಂದರ್ಭದಲ್ಲಿ ಬೆಂಗಳೂರು ಉತ್ತರ ಕ್ಷೇತ್ರ ಅಥವಾ ತುಮಕೂರು, ಇಲ್ಲವೇ ಚಿಕ್ಕಬಳ್ಳಾಪುರ ಜೆಡಿಎಸ್‌ ಆಯ್ಕೆಯಾಗಬಹುದು ಎಂಬ ನಿರೀಕ್ಷೆ ಕಾಂಗ್ರೆಸ್‌ನದಾಗಿತ್ತು.

ಆದರೆ, ಕಾಂಗ್ರೆಸ್‌ ನಾಯಕರ ಲೆಕ್ಕಾಚಾರ ತಲೆಕೆಳಗು ಮಾಡಿ ಮೈಸೂರು ಕ್ಷೇತ್ರವೇ ನಮಗೆ ಬೇಕು. ದೇವೇಗೌಡರು ಅಲ್ಲೇ ಸ್ಪರ್ಧೆ ಮಾಡಲಿದ್ದಾರೆ ಎಂದು ಜೆಡಿಎಸ್‌ ಇದೀಗ ಪಟ್ಟು ಹಿಡಿದಿದೆ. ಜತೆಗೆ, ಮೈಸೂರು ಜೆಡಿಎಸ್‌ಗೆ ಬಿಟ್ಟುಕೊಡೆದಿದ್ದರೆ ಮಂಡ್ಯದಲ್ಲಿ ಸ್ಪರ್ಧೆ ಬಯಸಿರುವ ಸುಮಲತಾ ಅವರನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮೈಸೂರಿನಿಂದ ಕಣಕ್ಕಿಳಿಸಿ ಎಂಬ ಸಂದೇಶ ರವಾನಿಸಿದ್ದಾರೆ. ಇದು ಸಿದ್ದರಾಮಯ್ಯ ಅವರಿಗೂ ನುಂಗಲಾರದ ತುತ್ತಾಗಿದೆ.

LEAVE A REPLY

Please enter your comment!
Please enter your name here