
ರಾಜ್ಯದ ಜನತೆಯ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ: ಶಾಸಕ ಬಂಡೆಪ್ಪ ಖಾಶೆಂಪುರ್
ಬೀದರ್ : ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ಮೊದಲ ಬಜೆಟ್ ಆಗಿತ್ತು. ಚುನಾವಣೆ ಹತ್ತಿರ ಬರುತ್ತಿರುವ ನಿಟ್ಟಿನಲ್ಲಿ ಏನಾದರೂ ವಿಶೇಷ ಯೋಜನೆಗಳನ್ನು ಜಾರಿಗೆ ತರುತ್ತಾರೆ ಎಂಬುದು ರಾಜ್ಯದ ಜನತೆಯ, ರೈತರ ನಿರೀಕ್ಷೆಯಾಗಿತ್ತು. ಆದರೆ ಈ ಬಜೆಟ್ ರಾಜ್ಯದ ಜನತೆಯ ನಿರೀಕ್ಷೆಯನ್ನು ಸಂಪೂರ್ಣವಾಗಿ ಹುಸಿಯಾಗಿಸಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು. ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ಮೇಲೆ ರಾಜ್ಯದ ರೈತರು, ಬಡವರು, ಯುವಕರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಒಳ್ಳೆಯ ದೊಡ್ಡಮಟ್ಟದ ಯೋಜನೆಗಳನ್ನು ಘೋಷಣೆ ಮಾಡ್ತಾರೆ ಎಂಬ ವಿಶ್ವಾಸ ಹೊಂದಿದ್ದರು. ಆದರೆ ಸಿಎಂರವರು ಮಂಡಿಸಿದ ಬಜೆಟ್ ಎಲ್ಲರ ನಿರೀಕ್ಷೆಗಳನ್ನು ಹುಸಿಯಾಗಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪಿಪಿಪಿ ಮಾಡಲ್ ಬಜೆಟ್ ಇದಾಗಿದೆ:
ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮ ಒನ್ ಆರಂಭಿಸಿದ್ದಾರೆ. ನಂದಿ ಬೆಟ್ಟ ಸೇರಿದಂತೆ ಈ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಬಹುತೇಕ ಶೇಕಡಾ 40% ಯೋಜನೆಗಳು ಪಿಪಿಪಿ ಮಾಡಲ್ ಯೋಜನೆಗಳಾಗಿವೆ. ಸರ್ಕಾರ ಎಲ್ಲೋ ಒಂದು ಕಡೆ ಪಬ್ಲಿಕ್, ಪ್ರವೈಟ್ ಪಾರ್ಟ್ನರ್ಶಿಪ್ ಮಾದರಿಯಲ್ಲಿ ಸಾಗುತ್ತಿದೆ. ನಾನು ಎರಡು ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಕೃಷಿ ಮತ್ತು ಸಹಕಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಈ ಬಜೆಟ್ ನಲ್ಲಿ ಕೃಷಿಕರಿಗೆ ವಿಶೇಷ ಸೌಲಭ್ಯಗಳನ್ನು ಏನನ್ನೂ ನೀಡಿಲ್ಲ. ಕುಮಾರಸ್ವಾಮಿರವರು ಮುಖ್ಯಮಂತ್ರಿ ಯಾಗಿದ್ದಾಗ ರೈತರ ಸಾಲಮನ್ನಾ ಮಾಡಿದ್ದರು. ಈ ಬಜೆಟ್ ನಲ್ಲಿ ಎಕರೆಗೆ ಇಪ್ಪತೈದು ಸಾವಿರ ರೂ. ರೈತರಿಗೆ ಪರಿಹಾರ ಕೊಡ್ತಿವಿ ಅಂತ ಹೇಳ್ಬೇಕಿತ್ತು. ನಾವು ಆ ನಿರೀಕ್ಷೆಯಲ್ಲಿ ಇದ್ದೇವು. ಒಂದು ಕಡೆ ಬೆಲೆ ಕುಸಿತವಾಗಿದೆ. ಪ್ರವಾಹದಿಂದ ರೈತರು ಸಂಕಷ್ಟಕ್ಕೆ ಸಿಲುಕ್ಕಿ ದ್ದಾರೆ. ಈ ಸಂದರ್ಭದಲ್ಲಿ ರೈತರಿಗೆ ವಿಶೇಷ ಯೋಜನೆಗಳನ್ನು ತರುವುದು ಅವಶ್ಯಕವಾಗಿತ್ತು.
ಹುಬ್ಬಳ್ಳಿ, ಧಾರವಾಡ, ಹಾವೇರಿಗೆ ಸೀಮಿತ:
ಉತ್ತರ ಕರ್ನಾಟಕ ಅಂದರೆ ಬೀದರ್ ಇಡ್ಕೊಂಡು ತಗೊಳ್ಳಿ ಅಂತ ನಾವು ಬಹಳಷ್ಟು ಬಾರೀ ಸಿಎಂ ಬೊಮ್ಮಾಯಿರವರಿಗೆ ಹೇಳಿದ್ದೇವು. ಆದರೆ ಹುಬ್ಬಳ್ಳಿ, ಧಾರವಾಡ, ಶಿಗ್ಗಾಂವ್, ಹಾವೇರಿ ಭಾಗಕ್ಕೆ ಹೆಚ್ಚಿನ ಮಹತ್ವ ಈ ಬಜೆಟ್ ನಲ್ಲಿ ನೀಡಲಾಗಿದೆ. ಡೈರಿ, ಮೇಗಾಡೈರಿ ಸೇರಿದಂತೆ ಎಲ್ಲಾ ಯೋಜನೆಗಳನ್ನು ಅಲ್ಲಿಗೆ ತೆಗೆದುಕೊಂಡು ಹೋಗಿದ್ದಾರೆ.ಕಲ್ಯಾಣ ಕರ್ನಾಟಕ ಭಾಗಕ್ಕೆ ಮೂರು ಸಾವಿರ ಕೋಟಿ ಕೊಡ್ತಿವಿ ಅಂತ ಅಧಿಕಾರಕ್ಕೆ ಬಂದಾಗಿನಿಂದಲೂ ಹೇಳ್ತಿದ್ದಾರೆ. ಮೂರು ಸಾವಿರ ಕೋಟಿ ರೂ. ಯಾವ ಮೂಲೆಯಲ್ಲಾಗುತ್ತೆ. ವರ್ಷಕ್ಕೆ ಒಂದುವರೇ ಸಾವಿರ ಕೋಟಿ ರೂ. ಖರ್ಚು ಮಾಡಿದರು ಕೂಡ ಯಾವೊಂದು ಸೆಕ್ಟರ್ ಅನ್ನು ಮೇಲೆತ್ತಲ್ಲೂ ಸಾಧ್ಯವಾಗುತ್ತಿಲ್ಲ. ಈ ಬಜೆಟ್ ಹುಬ್ಬಳ್ಳಿ, ಧಾರವಾಡ, ಹಾವೇರಿಗಳಿಗೆ ಸೀಮಿತವಾಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಆರೋಪಿಸಿದರು.