ಕೋಲಾರ. ಆತ ಸರ್ಕಾರಿ ಅಧಿಕಾರಿ, ತಾಲ್ಲೂಕು ದಂಡಾಧಿಕಾರಿ ಅಂಥಹವನಿಗೆ ಇಂಥಾದೊಂದು ಸಾವು ಬರುತ್ತೆ ಅಂಥ ಯಾರೊಬ್ಬರೂ ನಿರೀಕ್ಷೆ ಮಾಡಿರಲಿಕ್ಕೆ ಸಾಧ್ಯವೇ ಇಲ್ಲಾ,ಆದ್ರೆ ಅಂಥಾದೊಂದು ಘಟನೆ ನಡೆದುಹೋಗಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅಂಥ ನೋಡೋದಾದ್ರೆ, ನಿನ್ನೆ ಮದ್ಯಾಹ್ನ ಬಂಗಾರಪೇಟೆ ತಹಶಿಲ್ದಾರ್ ಚಂದ್ರಮೌಳೇಶ್ವರ ಕೋಲಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊರೊನಾ ಸಭೆಯನ್ನು ಮುಗಿಸಿಕೊಂಡು, ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ದೊಡ್ಡಕಳವಂಚಿ ಗ್ರಾಮದಲ್ಲಿ ವೆಂಕಟಪತಿ ಹಾಗೂ ರಾಮಮೂರ್ತಿ ಎಂಬುವರ ನಡುವಿನ ವಿವಾದಿತ ಜಮೀನೊಂದರ ಸರ್ವೇ ಕಾರ್ಯಕ್ಕೆ ತೆರಳಿದ್ರು.
ಈ ವೇಳೆ ಗ್ರಾಮದಲ್ಲಿ ಸರ್ವೇ ಕಾರ್ಯಮಾಡುತ್ತಿರುವಾಗಲೇ ವೆಂಕಟಪತಿ ಹಾಗೂ ಆತನ ಪತ್ನಿ ಸಾಕಷ್ಟು ತೊಂದರೆ ಮಾಡುತ್ತಿದ್ರು, ಸರ್ವೇ ಕಾರ್ಯಕ್ಕೂ ಅಡ್ಡಿಪಡಿಸುತ್ತಿದ್ರು ಅದೆಲ್ಲವನ್ನು ಪೊಲೀಸರ ಸಹಾಯದೊಂದಿಗೆ ಸಂಭಾಳಿಸಿಕೊಂಡು ಸರ್ವೆ ಮಾಡಲಾಗುತ್ತಿತ್ತು. ಇನ್ನೇನು ಸರ್ವೇ ಕಾರ್ಯ ಮುಗಿಯುವ ಹೊತ್ತಿಗೆ ಅಲ್ಲಿದ್ದ ಪೊಲೀಸರು ಹೊರಟಿದ್ರು ಈ ವೇಳೆಗೆ ಅಲ್ಲೇ ಇದ್ದ ವೆಂಕಟಪತಿ ತಹಶೀಲ್ದಾರ್ ಬಳಿ ತೆರಳಿ ಮನವಿ ಪತ್ರ ನೀಡುವ ನೆಪದಲ್ಲಿ ಹತ್ತಿರಹೋದವನೆ ತನ್ನ ಕವರ್ನಲ್ಲಿ ಇಟ್ಟುಕೊಂಡಿದ್ದ ಚಾಕುವಿನಿಂದ ತಹಶಿಲ್ದಾರ್ ಎದೆಗೆ ಚುಚ್ಚಿದ್ದಾನೆ, ತಕ್ಷಣ ಅಲ್ಲೇ ಕುಸಿದು ಬಿದ್ದ ತಹಶಿಲ್ದಾರರನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇನ್ನು ತಕ್ಷಣ ತಹಶಿಲ್ದಾರ್ ರನ್ನು ಜೀಪ್ನಲ್ಲೇ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಆದ್ರು ಬಂಗಾರಪೇಟೆ ಆಸ್ಪತ್ರೆಗೆ ಬರುವ ಹೊತ್ತಿಗೆ ತಹಶಿಲ್ದಾರ್ ಚಂದ್ರಮೌಳೇಶ್ವರ ಮೃತಪಟ್ಟಿದ್ರು. ಆದ್ರು ಕೊನೆ ಪ್ರಯತ್ನ ಎಂದು ಅಧಿಕಾರಿಗಳು ಹಾಗೂ ಪೊಲೀಸರು ಅವರ ಮೃತದೇಹವನ್ನು ಆಂಬ್ಯುಲೆನ್ಸ್ನಲ್ಲಿ ಪೊಲೀಸ್ ಬೆಂಗಾವಲು ವಾಹನದೊಂದಿಗೆ ಕೋಲಾರ ಜಾಲಪ್ಪಾ ಆಸ್ಪತ್ರೆಗೆ ತಂದರಾದ್ರು ಯಾವುದೇ ಪ್ರಯೋಜನವಾಗಲಿಲ್ಲ.
ಸೌಮ್ಯಸ್ವಭಾವದ ಸರಳ ವ್ಯಕ್ತಿತ್ವದ ತಹಶಿಲ್ದಾರ್ ಆಗಿದ್ದ ಚಂದ್ರಮೌಳೇಶ್ವರ ಬಂಗಾರಪೇಟೆಗೆ ತಹಶಿಲ್ದಾರ್ ಆಗಿ ಬಂದು ಮೂರು ವರ್ಷಕಳೆದಿತ್ತು. ತಮ್ಮ ಪ್ರಾಮಾಣಿಕ ಕೆಲಸಗಳಿಂದಲೇ ಹೆಸರು ಮಾಡಿದ್ದ ಅವರ ಕೊಲೆ ಜಿಲ್ಲೆಯ ಜನರಿಗೆ ಆಘಾತವನ್ನುಂಟು ಮಾಡಿತ್ತು. ಪರಿಣಾಮ ಆಸ್ಪತ್ರೆ ಬಳಿ ಜಿಲ್ಲೆಯ ಅಧಿಕಾರಿಗಳು ಜನಪ್ರತಿನಿಧಿಗಳು ಆಸ್ಪತ್ರೆ ಬಳಿ ಜಮಾಯಿಸಿದ್ರು.ಇನ್ನು ವಿಷಯ ತಿಳಿಯುತ್ತಿದ್ದಂತೆ ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಕೂಡಾ ಭೇಟಿ ನೀಡಿ ಪ್ರಕರಣದ ಖುದ್ದು ತನಿಖೆ ನಡಿಸಿದ್ರು.ನಿವೃತ್ತ ಸರ್ಕಾರಿ ಶಾಲಾ ಶಿಕ್ಷಕನೊಬ್ಬ ಇಂಥಾದೊಂದು ಕೃತ್ಯ ಎಸಗಿರೋದು ಆಘಾತಕಾರಿ ಹಾಗಾಗಿ ಇದನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ಎಸ್ಪಿ ಮಟ್ಟದ ಅಧಿಕಾರಿಯಿಂದ ತನಿಖೆ ಮಾಡಿಸುವುದಾಗಿ ಹೇಳಿದ್ರು.
ಸಂಸದ ಮುನಿಸ್ವಾಮಿ ಕೂಡಾ ಭೇಟಿ ನೀಡಿ ಒಬ್ಬ ದಕ್ಷ ಪ್ರಾಮಾಣಿಕ ಅಧಿಕಾರಿಯ ಸಾವಿಗೆ ಬೇಸರ ವ್ಯಕ್ತಪಡಿಸಿದ್ರು.ಇನ್ನು ತಹಶಿಲ್ದಾರ್ ತುಮಕೂರು ಜಿಲ್ಲೆ ಮಧುಗಿರಿ ಮೂಲದವರಾಗಿದ್ದು, ಕುಟುಂಬಸ್ಥರು ಬೆಂಗಳೂರಿನಲ್ಲಿ ನೆಲೆಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರೂ ಆಘಾತಕ್ಕೊಳಗಾಗಿದ್ದು, ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ಸರ್ಕಾರ ಕೂಡಾ ತಹಶಿಲ್ದಾರ್ ಕುಟುಂಬಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ 25 ಲಕ್ಷ ಪರಿಹಾರ ಘೋಷಣೆ ಮಾಡಿದ್ದು, ಅವರ ಕುಟುಂಬದ ಒಬ್ಬರಿಗೆ ಕೆಲಸ ನೀಡುವುದಾಗಿ ಹೇಳಿದ್ದಾರೆ. ಒಟ್ಟಾರೆ ಘಟನೆಯಿಂದ ಸರ್ಕಾರಿ ಅಧಿಕಾರಿಗಳು ಬೆಚ್ಚಿಬಿದ್ದಿದ್ದು ಇಂಥ ಘಟನೆ ನಡೆದ್ರೆ ಸರ್ಕಾರಿ ಅಧಿಕಾರಿಗಳ ಪಾಡೇನು ಎಂದು ಆತಂಕಕ್ಕೊಳಗಾಗಿದ್ದಾರೆ.