ಕೌಟುಂಬಿಕ ಕಲಹದಿಂದ ಬೇಸತ್ತು ಇಬ್ಬರು ಮಕ್ಕಳನ್ನು ಕೊಂದ ತಾಯಿ..!

ಬೆಂಗಳೂರು

ಕೌಟುಂಬಿಕ ಕಲಹದಿಂದ ಬೇಸತ್ತ ತಾಯಿಯೊಬ್ಬಳು ಇಬ್ಬರು ಮಕ್ಕಳನ್ನು ನೀರಿನ ಗುಂಡಿಯಲ್ಲಿ ಎಸೆದು ಕೊಲೆ ಮಾಡಿದ ಘಟನೆ ಸೇಡಂ ತಾಲ್ಲೂಕಿನ ಗೋಪಾನಪಲ್ಲಿ ಗ್ರಾಮದಲ್ಲಿ ನಡೆದಿದೆ.ಅನಿತಾ ಗಂಡ ಬಸಪ್ಪ ಪೂಜಾರಿ (28) ಎಂಬುವರೆ ಇಬ್ಬರು ಮಕ್ಕಳಾದ ಮೋನಿಕಾ (6) ಮತ್ತು ಸಿದ್ದಲಿಂಗ (4) ಅವರನ್ನು ನೀರಿನ ಗುಂಡಿಗೆ ಎಸೆದು ಕೊಲೆ ಮಾಡಿದವರು.

ಮಧ್ಯರಾತ್ರಿ ಈ ಘಟನೆ ನಡೆದಿದೆ. ಮಕ್ಕಳನ್ನು ಸಾಯಿಸಿ ತಾಯಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಗ್ರಾಮಸ್ಥರು ಆಕೆಯನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.ಸೇಡಂ ತಾಲ್ಲೂಕಿನ ಗೋಪಾನಪಲ್ಲಿ ಗ್ರಾಮದ ಬಸಪ್ಪ ಪೂಜಾರಿ ಮತ್ತು ಗುರುಮಠಕಲ್‌ ತಾಲ್ಲೂಕಿನ ಗಾಜರಕೋಟ ಸಮೀಪದ ಶಿವಪುರ ಗ್ರಾಮದ ಅನಿತಾ ಒಂಬತ್ತು ವರ್ಷಗಳ ಹಿಂದೆ ಮದುವೆಯಾಗಿದ್ದು, ಪತಿ-ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

ಕಳದೆ ಮೂರು ದಿನಗಳ ಹಿಂದೆಯೂ ಜಗಳ ನಡೆದು ಮಾತು ಬಿಟ್ಟಿದ್ದರು. ಇದರಿಂದ ಬೇಸತ್ತು ತಾಯಿ ತನ್ನ ಇಬ್ಬರು ಮಕ್ಕಳನ್ನು ನೀರಿನ ಗುಂಡಿಗೆ ಎಸೆದು ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಳು ಎಂದು ತಿಳಿದುಬಂದಿದೆ.ಸುದ್ದಿ ತಿಳಿದು ಮುಧೋಳ ಪೊಲೀಸ್‌ ಠಾಣೆಯ ಪಿ.ಐ.ಸಂದೀಪ್‌ ಮುರುಗನ್‌ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಅನಿತಾ ಅವರನ್ನು ಬಂಧಿಸಿದ್ದಾರೆ. ಈ ಸಂಬಂಧ ಮುಧೋಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.