
ಖಾಸಗಿ ಹೋಟೆಲ್ ಬಂದ್ ಮಾಡಿಸಿ ಅನ್ನ ಪ್ರಸಾದ ಹೆಚ್ಚಿಸಲು ಟಿಟಿಡಿ ನಿರ್ಧಾರ
ತಿರುಪತಿ: ದೇಶದಲ್ಲೇ ಅತ್ಯಂತ ಶ್ರೀಮಂತ ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ 12 ದೇವಸ್ಥಾನಗಳನ್ನು ನಿರ್ವಹಿಸುತ್ತಿರುವ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ (ಟಿಟಿಡಿ) ತಿರುಮಲದ ಎಲ್ಲಾ ಖಾಸಗಿ ರೆಸ್ಟೋರೆಂಟ್, ಹೋಟೆಲ್ ಗಳನ್ನು ಬಂದ್ ಮಾಡಿಸಲು ಮುಂದಾಗಿದೆ. ಹೋಟೆಲ್ ಬದಲಾಗಿ ದೇವಸ್ಥಾನದಲ್ಲೇ ಹೆಚ್ಚುವರಿ ಅನ್ನ ಪ್ರಸಾದ ತಯಾರಿಸಿ ಭಕ್ತರಿಗೆ ವಿತರಿಸಲು ಚಿಂತನೆ ನಡೆಸಿದೆ. ಇನ್ನು ಬಂದ್ ಮಾಡಲಾಗುವ ಹೋಟೆಲ್, ರೆಸ್ಟೋರೆಂಟ್ ನವರಿಗೆ ತಿರುಮಲದಲ್ಲಿ ಇತರ ಉದ್ಯಮ ನಡೆಸಲು ಅನುಮತಿ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.
ಇನ್ನು ಮುಂಬೈನಲ್ಲಿ ಶ್ರೀವಾರಿ ದೇವಸ್ಥಾನ ನಿರ್ಮಿಸಲು ಭೂಮಿಗೆ ಅನುಮತಿ ಪಡೆಯಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಒಂದು ತಿಂಗಳೊಳಗೆ ಭೇಟಿ ಮಾಡಲು ಪ್ರಯತ್ನಿಸುವುದಾಗಿ ಟ್ರಸ್ಟ್ ಹೇಳಿದೆ. ಗುರುವಾರ ನಡೆದ ಮಂಡಳಿಯ ಸಭೆಯ ನಂತರ, 2023 ರ ಆರ್ಥಿಕ ವರ್ಷಕ್ಕೆ ದೇವಾಲಯದ ಪಾಲನೆ ಮತ್ತು ಸಂಬಂಧಿತ ವೆಚ್ಚಗಳಿಗಾಗಿ 3,096 ಕೋಟಿಯನ್ನು ರೂಪಾಯಿಯ ಬಜೆಟ್ಗೆ ಅನುಮೋದಿಸಲಾಗಿದೆ ಎಂದು ಟಿಟಿಡಿ ತಿಳಿಸಿದೆ. ಅಲ್ಲದೆ ದೇವಾಲಯಗಳ ಒಕ್ಕೂಟದ ಸುಗಮ ಕಾರ್ಯನಿರ್ವಹಣೆಗಾಗಿ ಹಲವಾರು ಕಾರ್ಯ ಕ್ರಮಗಳನ್ನು ಕೈಗೊಂಡಿರುವುದಾಗಿ ಟಿಟಿಡಿ ಹೇಳಿದೆ.