ಇಡೀ ಉಕ್ರೇನ್ ಬಿಕ್ಕಟ್ಟಿಗೆ ಅಮೆರಿಕವೇ ಮೂಲ ಕಾರಣ: ಉತ್ತರ ಕೊರಿಯಾ ಆರೋಪ

ಅಂತರಾಷ್ಟ್ರೀಯ

ಸಿಯೋಲ್ : ಜಗತ್ತಿನ ಯಾವ ವಿಚಾರಗಳಿಗೂ ತಲೆಹಾಕದ, ತನ್ನ ತಂಟೆಗೆ ಬಂದರೆ ಯಾರನ್ನೂ ಬಿಡದ ಉತ್ತರ ಕೊರಿಯಾ ಇದೇ ಮೊದಲ ಬಾರಿಗೆ ರಷ್ಯಾ ಹಾಗೂ ಉಕ್ರೇನ್ ಬಿಕ್ಕಟ್ಟಿನ ಪರಿಸ್ಥಿತಿಯ ಬಗ್ಗೆ ತನ್ನ ಹೇಳಿಕೆಯನ್ನು ನೀಡಿದೆ. ತನ್ನ ಇಡೀ ಹೇಳಿಕೆಯಲ್ಲಿ ಬದ್ಧವೈರಿ ಅಮೆರಿಕವನ್ನು ತೆಗಳಿರುವ ಉತ್ತರ ಕೊರಿಯಾ ಸರ್ಕಾರ, “ಅಮೆರಿಕ ಮೂಗು ತೂರಿಸೋದು ಬಿಟ್ರೆ ಎಲ್ಲಾ ಸಮಸ್ಯೆಗಳು ತನ್ನಿಂದ ತಾನೇ ಸರಿಯಾಗುತ್ತದೆ’ ಎನ್ನುವ ಅರ್ಥದ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಉಕ್ರೇನ್ ಮೇಲಿನ ಆಕ್ರಮಣದ ಕುರಿತಾಗಿ ಪ್ಯೋಂಗ್ಯಾಂಗ್ ಮೊದಲ ಅಧಿಕೃತ ಪ್ರಕಟಣೆ ನೀಡಿದ್ದು, ರಷ್ಯಾದ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಇಡೀ ಉಕ್ರೇನ್ ಬಿಕ್ಕಟ್ಟಿಗೆ ಅಮೆರಿಕವೇ ಮೂಲ ಕಾರಣ ಎಂದು ಆರೋಪ ಮಾಡಿದೆ.

ಕಳೆದ ಗುರುವಾರ ನೆರೆಯ ಉಕ್ರೇನ್ ನ ಮೇಲೆ ವಿಶೇಷ ಮಿಲಿಟರಿ ಕಾರ್ಯಾಚರಣೆಗೆ ರಷ್ಯಾ ಅಧ್ಯಕ್ಚ ವ್ಲಾಡಿಮಿರ್ ಪುಟಿನ್ ಆದೇಶ ನೀಡಿದ್ದರು. ಇದರ ಬೆನ್ನಲ್ಲಿಯೇ ಜಾಗತಿಕವಾಗಿ ರಷ್ಯಾದ ಕ್ರಮವನ್ನು ಟೀಕೆ ಮಾಡಲಾಗಿತ್ತಲ್ಲದೆ, ಅಮೆರಿಕ ಸೇರಿದಂತೆ ಯುರೋಪಿಯನ್ ಯೂನಿಯನ್ ಗಳು ರಷ್ಯಾದ ಮೇಲೆ ಅನೇಕ ರೀತಿಯ ನಿರ್ಬಂಧಗಳನ್ನು ಹೇರಿದ್ದವು. ವ್ಲಾಡಿಮಿರ್ ಪುಟಿನ್ ಮೇಲೂ ಕೆಲ ದೇಶಗಳು ದಿಗ್ಭಂದನ ವಿಧಿಸಿದ್ದವು. ಇಡೀ ವಿಚಾರದಲ್ಲಿ ಉತ್ತರ ಕೊರಿಯಾವು ವಿದೇಶಾಂಗ ಇಲಾಖೆಯ ವೆಬ್ ಸೈಟ್ ನಲ್ಲಿ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿ ಸುಮ್ಮನಾಗಿದೆ. ಒಟ್ಟಾರೆ ಈ ಅನಾಹುತಕ್ಕೆ ಅಮೆರಿಕವೇ ಮೂಲ ಕಾರಣ ಎಂದು ಆರೋಪ ಮಾಡಿದೆ.

ನಾರ್ತ್ ಸೊಸೈಟಿ ಫಾರ್ ಇಂಟರ್‌ನ್ಯಾಶನಲ್ ಪಾಲಿಟಿಕ್ಸ್ ಸ್ಟಡಿಯಲ್ಲಿ ಸಂಶೋಧಕರಾದ ರಿ ಜಿ ಸಾಂಗ್‌ ನೀಡಿರುವ ವ್ಯಾಖ್ಯಾನದ ಪ್ರಕಾರ, ವಾಷಿಂಗ್ಟನ್ “ತನ್ನ ಭದ್ರತೆಗಾಗಿ ರಷ್ಯಾದ ಕಾನೂನುಬದ್ಧ ಬೇಡಿಕೆಯನ್ನು ಕಡೆಗಣಿಸಿ ಮಿಲಿಟರಿ ಪ್ರಾಬಲ್ಯವನ್ನು” ಅನುಸರಿಸಿದೆ ಎಂದು ಹೇಳಿದೆ. ಉಕ್ರೇನ್ ಬಿಕ್ಕಟ್ಟಿನ ಮೂಲ ಕಾರಣವು ಅಮೆರಿಕದ ನಿರಂಕುಶ ಪ್ರಭುತ್ವದ ಆಸೆಯದ್ದಾಗಿದೆ ಎಂದು ವೆಬ್ ಸೈಟ್ ನಲ್ಲಿ ಶನಿವಾರ ಪ್ರಕಟವಾಗಿರುವ ಹೇಳಿಕೆಯಲ್ಲಿ ವಿವರಿಸಲಾಗಿದೆ. ಅಮೆರಿಕದ ಗೋಸುಂಬೆ ವರ್ತನೆಯನ್ನು ರಿ ಅವರು ಟೀಕೆ ಮಾಡಿದ್ದಾರೆ.  ಶಾಂತಿ ಹಾಗೂ ಸ್ಥಿರತೆಯ ಹೆಸರಿನಲ್ಲಿ ಅಮೆರಿಕವು ಬೇರೆ ದೇಶಗಳ ಆಂತರರಿಕ ವ್ಯವಹಾರದಲ್ಲಿ ಮೂಗು ತೂರಿಸುತ್ತದೆ. ಆದರೆ, ಯಾವುದೇ ಕಾರಣವಿಲ್ಲದೆ, ಇತರ ದೇಶಗಳು ಕೈಗೊಂಡ ಸ್ವಯಂ ರಕ್ಷಣಾ ಕ್ರಮವನ್ನು ಖಂಡನೆ ಮಾಡುತ್ತದೆ. ಅಮೆರಿಕವು ಬೇರೆ ದೇಶಕ್ಕಿಂತ ತನ್ನ ರಾಷ್ಟ್ರೀಯ ಭದ್ರತೆಯನ್ನು ಮೊದಲು ಖಚಿತಪಡಿಸಿಕೊಳ್ಳಲಿ ಎಂದು ಹೇಳಿದ್ದಾರೆ.

Leave a Reply

Your email address will not be published.