
ಕೊಡಗು ಜಿಲ್ಲೆಯಲ್ಲಿ ಮುಂದುವರೆದ ವರುಣನ ಆರ್ಭಟ: ಮನೆಯಿಂದ ಹೊರಬರಲೂ ಜನರ ಪರದಾಟ
ಕೊಡಗು :ಕೊಡಗು ಜಿಲ್ಲೆಯಲ್ಲಿ ಬಿಡುವು ನೀಡದೆ ಮಳೆ ಸುರಿಯುತ್ತಿದೆ. ಧಾರಾಕಾರ ಮಳೆ ಆಗುತ್ತಿರುವುದರಿಂದ ಜಿಲ್ಲೆಯ ಅಲ್ಲಲ್ಲಿ ಹಾನಿಯಾಗಿ, ಹೊದವಾಡ-ಕೊಟ್ಟಮುಡಿಯಿಂದ ನಾಪೋಕ್ಲುವಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಅರ್ಧ ಭಾಗ ಕುಸಿದಿದ್ದು, ವಾಹನ ಸಂಚಾರ ವ್ಯತ್ಯಯ ಉಂಟಾಗಿದೆ. ಈ ರಸ್ತೆ ಸರಿಪಡಿಸುವಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮರಳು ಚೀಲ ಅಳವಡಿಸಿದ್ದು, ಭಾರಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಪರ್ಯಾಯ ಮಾರ್ಗವಾಗಿ ಹೊದವಾಡ, ಬೋಳಿಬಾನೆ ರಸ್ತೆ ಮೂಲಕ ಮೂರ್ನಾಡು ಮಾರ್ಗವಾಗಿ ಸಂಚರಿಸಬಹುದಾಗಿದೆ ಎಂದು ತಹಶೀಲ್ದಾರ್ ಪಿ.ಎಸ್.ಮಹೇಶ್ ಅವರು ತಿಳಿಸಿದ್ದಾರೆ. ರಸ್ತೆ ಕುಸಿದಿರುವ ಪ್ರದೇಶಕ್ಕೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿರುವುದರಿಂದ ಆಗಸ್ಟ್, 07 ರ ಬೆಳಗ್ಗೆ 8.30 ರವರೆಗೆ ರೆಡ್ ಅಲರ್ಟ್(204 ಮಿ.ಮೀ.ಗಿಂತ ಹೆಚ್ಚು ಮಳೆ)ನ್ನು ಹವಾಮಾನ ಇಲಾಖೆ ಘೋಷಿಸಿದೆ.