
ರಷ್ಯಾ ಸೈನಿಕರಿಂದ ಭಾರತೀಯರಿಗೆ ಹಿಂಸೆ;ವಿಡಿಯೋ ಷೇರ್ ಮಾಡಿ ಸಂಕಟ ಪಟ್ಟ ರಾಹುಲ್ ಗಾಂಧಿ
ದೆಹಲಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಬೆನ್ನಲ್ಲೇ ಉಕ್ರೇನ್ನಿಂದ ಭಾರತೀಯರನ್ನು ವಾಪಸ್ ಕರೆತರುವ ಕಾರ್ಯ ಭರದಿಂದ ಸಾಗುತ್ತಿದೆ. ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳಿ ಬೆಂಗಳೂರು, ದೆಹಲಿಗೆ ಬಂದಿಳಿದಿದ್ದಾರೆ. ಆಪರೇಶನ್ ಗಂಗಾ ಹೆಸರಿನ ಕಾರ್ಯಾಚರಣೆಯಡಿ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲಾಗುತ್ತಿದೆ. ಇದರ ನಡುವೆಯೂ ಇನ್ನೂ ಸಾವಿರಾರು ಮಂದಿ ಭಾರತೀಯರು ಉಕ್ರೇನ್ನಲ್ಲಿಯೇ ಸಿಲುಕಿದ್ದಾರೆ. ರಷ್ಯಾ ಸೈನಿಕರ ಕ್ರೌರ್ಯ ಮಿತಿಮೀರಿದ್ದು ಪೋಲ್ಯಾಂಡ್, ರೊಮೇನಿಯಾ ಗಡಿ ಭಾಗಕ್ಕೆ ತೆರಳಿರುವ ಭಾರತೀಯರು ಸೇರಿ ಇನ್ನಿತರ ದೇಶಗಳ ಜನರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಉಕ್ರೇನ್ ವಾಯುಮಾರ್ಗ ಬಂದ್ ಆಗಿರುವ ಹಿನ್ನೆಲೆಯಲ್ಲಿ ಭಾರತೀಯರು ಸೇರಿ ಉಳಿದ ದೇಶಗಳ ಜನರು ಪೋಲ್ಯಾಂಡ್ ಮತ್ತು ರೊಮೇನಿಯಾ ಗಡಿಯವರಿಗೆ ರಸ್ತೆ ಮಾರ್ಗದ ಮೂಲಕ ಬಂದು, ಅಲ್ಲಿಂದ ತಮ್ಮ ತಾಯ್ನಾಡಿನ ವಿಮಾನ ಹತ್ತುತ್ತಿದ್ದಾರೆ. ಆದರೆ ಹೀಗೆ ಗಡಿ ಭಾಗಕ್ಕೆ ಬಂದಿರುವ ಜನರ ಮೇಲೆ ರಷ್ಯಾ ಸೈನಿಕರು ದೌರ್ಜನ್ಯ ಎಸಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರೂ ಕೂಡ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇಂಥ ಹಿಂಸೆಯನ್ನು ಅನುಭವಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ನೋಡಲು ತುಂಬ ದುಃಖವಾಗುತ್ತಿದೆ. ಈ ವಿಡಿಯೋವನ್ನು ಅವರ ಪಾಲಕರೂ ನೋಡುತ್ತಾರೆ. ತಮ್ಮ ಮಕ್ಕಳಿಗೆ ಹೀಗೆಲ್ಲ ಹಿಂಸೆ ನೀಡುವ ದೃಶ್ಯವನ್ನು ನೋಡುವ ಸ್ಥಿತಿ ಯಾವ ಪಾಲಕರಿಗೂ ಬರಬಾರದು. ಇವರನ್ನೆಲ್ಲ ಅಲ್ಲಿಂದ ಭಾರತಕ್ಕೆ ಕರೆತರಲು ಭಾರತ ಸರ್ಕಾರ ಏನೆಲ್ಲ ಯೋಜನೆ ರೂಪಿಸಿದೆ ಎಂಬುದನ್ನು ತಿಳಿಸಬೇಕು. ವಿದ್ಯಾರ್ಥಿಗಳ ಕುಟುಂಬಕ್ಕೂ ಹೇಳುವ ಮೂಲಕ ಸಮಾಧಾನ ಮಾಡಬೇಕು. ನಮ್ಮ ಜನರು ಹೀಗೆ ಅನಾಥರಾಗಲು ಬಿಡಬಾರದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.