ವಿಶ್ವದಲ್ಲೇ ಮೊದಲ ಬಾರಿಗೆ ಎಚ್​ಐವಿಯಿಂದ ಮಹಿಳೆ ಸಂಪೂರ್ಣ ಗುಣಮುಖ..!

ಅಂತರಾಷ್ಟ್ರೀಯ

ಅಮೆರಿಕಕಾಂಡಕೋಶಗಳು ಅಥವಾ ಸ್ಟೆಮ್​ ಸೆಲ್​ಗಳು ಎಂದು ಕರೆಯಲ್ಪಡುವ ಜೀವಕೋಶಗಳನ್ನು ಕಸಿ ಮಾಡುವ ಮೂಲಕ, ಕೆಲವೊಂದು ರೋಗಗಳನ್ನ ಯಶಸ್ವಿಯಾಗಿ ಗುಣಪಡಿಸಬಹುದಾಗಿದೆ. ಏಡ್ಸ್​ ಅನ್ನು ಕೂಡಾ ಸ್ಟೆಮ್ ಸೆಲ್ ಕಸಿಯ ಮೂಲಕ ಗುಣಪಡಿಸಬಹುದು ಅನ್ನೋದು ಅಚ್ಚರಿಯಾದರೂ ಸತ್ಯ. ಈ ಮೊದಲು ಇಬ್ಬರು ರೋಗಿಗಳನ್ನು ಇದೇ ರೀತಿಯ ಕಸಿ ಮಾಡುವ ಮೂಲಕ ಗುಣಪಡಿಸಲಾಗಿತ್ತು. ಈಗ ಮಹಿಳೆಯೊಬ್ಬರನ್ನು ಹೆಚ್​ಐವಿ ಸೋಂಕಿನಿಂದ ಗುಣಪಡಿಸಲಾಗಿದೆ.

ಈ ಮೂಲಕ ಸ್ಟೆಮ್ ಸೆಲ್ ಚಿಕಿತ್ಸೆ ಮೂಲಕ ಹೆಚ್​ಐವಿ ಸೋಂಕಿನಿಂದ ಚೇತರಿಕೆ ಕಂಡ ಮೊದಲ ಮಹಿಳೆ ಇವರಾಗಿದ್ದಾರೆ. ಹೌದು, ಅಮೆರಿಕ ಮೂಲದ ರೋಗಿಯನ್ನು ಹೆಚ್​ಐವಿ ಸೋಂಕಿನಿಂದ ಗುಣಪಡಿಸಲಾಗಿದ್ದು, ಆಕೆ ಲ್ಯುಕೇಮಿಯಾ ರೋಗದಿಂದಲೂ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಹೆಚ್​​ಐವಿ ಸೋಂಕನ್ನು ಈಗಾಗಲೇ ಜಯಿಸಿದ್ದ ವ್ಯಕ್ತಿಯೊಬ್ಬರ ಸ್ಟೆಮ್ ಸೆಲ್ ಅನ್ನು ‘ದಾನ’ ಪಡೆದುಕೊಂಡು ಮಹಿಳೆಗೆ ನೀಡಿ, ಆಕೆಯನ್ನು ಹೆಚ್​ಐವಿಯಿಂದ ಗುಣಪಡಿಸಲಾಗಿದೆ.

ಡೆನ್ವರ್‌ನಲ್ಲಿ ನಡೆದ ಕಾನ್ಫರೆನ್ಸ್ ಆನ್ ರೆಟ್ರೊವೈರಸಸ್​ ಆ್ಯಂಡ್ ಆಪರ್ಚುನಿಸ್ಟಿಕ್ ಇನ್ಫೆಕ್ಷನ್ ಸಮ್ಮೇಳನದಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಲಾಗಿದ್ದು, ಈ ಚಿಕಿತ್ಸಾ ನೂತನ ವಿಧಾನದ ಮೂಲಕ ಹೆಚ್ಚಿನ ಜನರನ್ನು ಹೆಚ್​​ಐವಿಯಿಂದ ಗುಣಪಡಿಸಬಹುದಾಗಿದೆ. ಆಕೆಗೆ ಹೊಕ್ಕುಳ ಬಳ್ಳಿಯಿಂದ ತೆಗೆದ ಸ್ಟೆಮ್ ಸೆಲ್ ಕಸಿ ಮಾಡಿದಾಗಿನಿಂದ, ಆಕೆಯಲ್ಲಿ ಹೆಚ್​ಐವಿ ಪ್ರಭಾವ ಕಡಿಮೆಯಾಗುತ್ತಾ ಬಂದಿದ್ದು, 14 ತಿಂಗಳಲ್ಲಿ ಆಕೆಯಲ್ಲಿ ಹೆಚ್​ಐವಿ ವೈರಸ್ ನಾಪತ್ತೆಯಾಗಿದೆ. ಈ ಮೂಲಕ ಹೆಚ್​​ಐವಿಗೆ ಆ್ಯಂಟಿ ವೈರಲ್ ಥೆರಪಿಯಂಥ ಪ್ರಬಲ ಚಿಕಿತ್ಸಾ ವಿಧಾನಗಳು ಅವಶ್ಯಕತೆ ಇಲ್ಲವೆಂದು ತಿಳಿದುಬಂದಿದೆ.

ಮೊದಲೇ ಹೇಳಿದಂತೆ ಹಿಂದಿನ ಬಾರಿ ಇಬ್ಬರು ಪುರುಷರಿಗೆ ಅಸ್ಥಿಮಜ್ಜೆಯ (ಬೋನ್ ಮ್ಯಾರೋ) ಸ್ಟೆಮ್ ಸೆಲ್ ಕಸಿ ಮಾಡಿ ಹೆಚ್​​​ಐವಿಯಿಂದ ಗುಣಪಡಿಸಲಾಗಿತ್ತು. ಓರ್ವ ವ್ಯಕ್ತಿ ಶ್ವೇತವರ್ಣದ ವ್ಯಕ್ತಿಯಾದರೆ, ಮತ್ತೊಬ್ಬ ವ್ಯಕ್ತಿ ಲ್ಯಾಟಿನ್ ವ್ಯಕ್ತಿಯಾಗಿದ್ದನು. ಈಗ ಏಡ್ಸ್​ನಿಂದ ಚೇತರಿಕೆ ಕಂಡಿರುವ ಮಹಿಳೆ ಕಪ್ಪು ಮತ್ತು ಬಿಳಿ ವರ್ಣಗಳ ಮಿಶ್ರಣವಾಗಿದ್ದಾರೆ ಎಂದು ಇಂಟರ್​ನ್ಯಾಷನಲ್ ಏಡ್ಸ್​ ಸೊಸೈಟಿ ಅಧಿಕೃತ ಹೇಳಿಕೆ ನೀಡಿದೆ.

Leave a Reply

Your email address will not be published.