
ಮಹಿಳಾ ಪಿಎಸ್ ಐ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಕೊಲೆ ಪ್ರಕರಣದ ಆರೋಪಿ
ಕಲಬುರಗಿ: ಕಾಂಗ್ರೆಸ್ ಮುಖಂಡ ಗಿರೀಶ ಕಂಬಾನೂರ ಕೊಲೆಯ ಪ್ರಮುಖ ಆರೋಪಿ ವಿಜಯ ಹಳ್ಳಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಶಹಬಾದ್ ಪಟ್ಟಣದ ಹೊರವಲಯದಲ್ಲಿ ಗುಂಡಿನ ದಾಳಿ ನಡೆಸಲಾಗಿದ್ದು, ಆರೋಪಿಯ ಬಲಗಾಲಿಗೆ ಗುಂಡೇಟು ತಗುಲಿದೆ. ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಪಿಎಸ್ಐ ಸುವರ್ಣಾ ಅವರಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜುಲೈ 11ರಂದು ಶಹಬಾದ್ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಗಿರೀಶ ಕಂಬಾನೂರ ಕೊಲೆ ನಡೆದಿತ್ತು.
ಪ್ರಕರಣದ ಆರೋಪಿ ವಿಜಯನನ್ನು ಶುಕ್ರವಾರ ಬಂಧಿಸಿದ ಪೊಲೀಸರು, ಇಂದು ಬೆಳಗ್ಗೆ 7-30ರ ಸುಮಾರಿಗೆ ಕೊಲೆಗೆ ಬಳಸಿದ ಮಾರಕಾಸ್ತ್ರವೊಂದನ್ನು ಬಿಸಾಡಿದ ಸ್ಥಳ ಮಹಜರು ನಡೆಸಲು ಕರೆದೊಯ್ದಿದ್ದರು. ತಾನು ಬಿಸಾಡಿದ ಮಚ್ಚು ತೋರಿಸಿದ ಆರೋಪಿ, ಅದೇ ಮಚ್ಚಿನಿಂದ ಪಿಎಸ್ಐ ಸುವರ್ಣಾ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ತನಿಖಾಧಿಕಾರಿಯಾದ ಚಿತ್ತಾಪುರ ಸಿಪಿಐ ಪ್ರಕಾಶ ಯಾತನೂರ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ವಿಜಯಗೆ ಶರಣಾಗುವಂತೆ ಹೇಳಿದ್ದಾರೆ.