Home District ಗ್ರಾಪಂ ಗೆಲುವಲ್ಲಿ ಸಚಿವರಾದ S.T.ಸೋಮಶೇಖರ್ ಪಾತ್ರ ಗಣನೀಯ; ಪ್ರತಾಪ್ ಸಿಂಹ

ಗ್ರಾಪಂ ಗೆಲುವಲ್ಲಿ ಸಚಿವರಾದ S.T.ಸೋಮಶೇಖರ್ ಪಾತ್ರ ಗಣನೀಯ; ಪ್ರತಾಪ್ ಸಿಂಹ

583
0

ಮೈಸೂರು: ಗ್ರಾಮರಾಜ್ಯದ ಮೂಲಕ ರಾಮರಾಜ್ಯವನ್ನು ನಿರ್ಮಾಣ ಮಾಡುವ ಸಂಕಲ್ಪವನ್ನು ಬಿಜೆಪಿ ಹೊಂದಿದೆ. ಈ ಮೂಲಕ ಮಹಾತ್ಮ ಗಾಂಧೀಜಿಯವರ ಕನಸನ್ನು ನನಸು ಮಾಡುತ್ತೇವೆ. ಗ್ರಾಮೀಣ ಭಾಗದ ಅಭಿವೃದ್ಧಿ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಮೈಸೂರಿನಲ್ಲಿ ಜನಸೇವಕ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿಗಳು, ಪಕ್ಷದ ಬಲವರ್ಧನೆಗೆ ರಾಜ್ಯಾಧ್ಯಕ್ಷರಾದ ಕಟೀಲ್ ಅವರು ಸಾಕಷ್ಟು ಶ್ರಮವಹಿಸಿದ್ದಾರೆ. ಇನ್ನು ಕಾರ್ಯಕರ್ತರೂ ಸಹ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಪ್ರಯತ್ನವನ್ನು ಹಾಕಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 140ರಿಂದ 150 ಕ್ಷೇತ್ರಗಳಲ್ಲಿ ನಿಶ್ಚಿತವಾಗಿ ಗೆಲ್ಲಲಿದ್ದೇವೆ. ಇದಕ್ಕಾಗಿ ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಮಹಿಳೆಯರಿಗೆ ಮನೆಯಲ್ಲಿಯೇ ಕೆಲವೊಮ್ಮೆ ಗೌರವವನ್ನು ಕೊಡುತ್ತಿರಲಿಲ್ಲ. ಆದರೆ ಇಂದು ಸ್ತ್ರೀ ಯರು ಗ್ರಾಪಂ ನಲ್ಲಿ ಗೆದ್ದು ಸ್ವಾಭಿಮಾನಿಗಳಾಗಿದ್ದಾರೆ. ಒಂದು ದಿನವೂ ಬಿಡುವಿಲ್ಲದೆ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಅವರು ಅದ್ಬುತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.ಕಾಂಗ್ರೆಸ್ ಬಗ್ಗೆ ಮಾತನಾಡುವುದೇ ನಮಗೆ ಶೋಭೆ ಅಲ್ಲ. ಕಾಂಗ್ರೆಸ್ ಎಲ್ಲಿದೆ? ಎಲ್ಲಿ ಅಧಿಕಾರದಲ್ಲಿದೆ. ಗೋಮಾಂಸವನ್ನು ತಿನ್ನುವ ಹೇಳಿಕೆ ನೀಡುವ, ಬೇಕೆಂದೇ ಪ್ರಚೋದನಕಾರಿಯಾಗಿ ಮಾತನಾಡುವವರ ಬಗ್ಗೆ ನಾವು ಪ್ರತಿಕ್ರಿಯೆಯನ್ನೇ ಕೊಡಬಾರದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿ, ಇಡೀ ಕರ್ನಾಟಕವನ್ನೇ ಕಲ್ಯಾಣಗೊಳಿಸಲು ಶ್ರಮವಹಿಸುವ ಕೆಲಸವನ್ನು ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಮಾಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ನಮ್ಮವರು ಗೆದ್ದಿದ್ದಾರೆ ಎಂದರು.ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದರ್ಪ, ಅಹಂಕಾರವನ್ನು ತೋರಿಸಿದೆ. ಅದಕ್ಕಾಗಿ ಜನ ಬಿಜೆಪಿಯನ್ನು ಕೈಹಿಡಿದಿದ್ದಾರೆ. ಯಡಿಯೂರಪ್ಪ ಅವರು ಎಲ್ಲರಿಗೂ ಮಾದರಿ. ಅವರೇ ಎಲ್ಲ ಕಾರ್ಯಕರ್ತರಿಗೆ ಬಲ ಎಂದರು.

ಇಂದು 45 ಸಾವಿರ ಜನ ಪಂಚಾಯತ್ ಸದಸ್ಯರಾಗಿದ್ದಾರೆಂದರೆ ಅದಕ್ಕೆ ಪ್ರಧಾನಿಗಳಾದ ನರೇಂದ್ರ ಮೋದಿಯವರು ಹಾಗೂ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರ ಜನಪರ ಕಾರ್ಯಕ್ರಮಗಳೇ ಕಾರಣ. ಪಕ್ಷದ ಕಾರ್ಯಕರ್ತರು ಹಾಗೂ ನೂತನ ಗ್ರಾಪಂ ಸದಸ್ಯರು ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಡಬೇಕು ಎಂದು ಕರೆ ನೀಡಿದರು.ಕಾಂಗ್ರೆಸ್ ಗೆ ಮೂರು ಶಾಪಗಳು ತಟ್ಟಿದೆ. ಗಾಂದೀಜಿಯವರು ಸ್ವಾತಂತ್ರ್ಯಕ್ಕಾಗಿ ಶ್ರಮಿಸಿ ಸ್ವಾತಂತ್ರ್ಯ ತಂದುಕೊಟ್ಟರೆ, ಅವರ ಫೋಟೋ ಹಿಡಿದು ಅಧಿಕಾರಕ್ಕೆ ಬಂದರೂ 70 ವರ್ಷಗಳಲ್ಲಿ ಅವರ ಚಿಂತನೆಯನ್ನು ಅಳವಡಿಸಿಲ್ಲ. ಕೊನೆಗೆ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಮಾಡಿದ್ದಾರೆ. ಇನ್ನು ಎರಡನೆಯದಾಗಿ ಶ್ರೇಷ್ಠ ಸಂವಿಧಾನವನ್ನು ನಿರ್ಮಾಣ ಮಾಡಿದ ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ಮತ ಕೇಳಿ ಗೆದ್ದರು.

ಆದರೆ, ಅವರನ್ನೇ ಮರೆತರು, ಅವಮಾನ ಮಾಡಿದರು. ಅವರ ಆದರ್ಶದ ಚಿಂತನೆಯಿಂದ ಇಂದು ಚಹ ಮಾರುತ್ತಿದ್ದ ನರೇಂದ್ರ ಮೋದಿಯವರು ಪ್ರಧಾನಮಂತ್ರಿಗಳಾದರು. ಇನ್ನು 3ನೇ ಶಾಪವೆಂದರೆ ಗೋಮಾಂಸವನ್ನು ತಿನ್ನುತ್ತೇವೆ ಎಂಬುದು. ಆದರೆ, ಯಡಿಯೂರಪ್ಪ ಅವರ ಸರ್ಕಾರ ಗೋವಧೆಯನ್ನು ನಿಷೇಧಿಸಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿದರು ಎಂದು ತಿಳಿಸಿದರು. ಇದೇ ಗೆಲುವಿನೊಂದಿಗೆ ಮುಂದೂ ಸಹ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ವಿಜಯ ಯಾತ್ರೆ ಮುಂದುವರಿಯಬೇಕು. ಈ ಕಾರ್ಯಕ್ರಮಕ್ಕೆ ಸಹ ಮೈಸೂರಿನಿಂದಲೇ ಚಾಲನೆ ಕೊಡಲಾಗುವುದು ಎಂದು ಕಟೀಲ್ ಹೇಳಿದರು.

ಕಾರ್ಯಕರ್ತರಿಗೆ ಬಲ : ಸಂಸದರಾದ ಪ್ರತಾಪ್ ಸಿಂಹ ಮಾತನಾಡಿ, ಪಂಚಾಯಿತಿಯಿಂದ ಸಂಸತ್ ವರೆಗೆ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದೆ ಎಂದರೆ ಅದಕ್ಕೆ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಕಾರಣರಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯ ಸಂಚಾರ ಮಾಡಿ ಕಾರ್ಯಕರ್ತರಿಗೆ ಬಲ ತುಂಬುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸಬೇಕಾದರೆ ಅದಕ್ಕೆ ನಮ್ಮ ಕಾರ್ಯಕರ್ತರು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದಲ್ಲಿರಬೇಕೆಂದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶ್ರಮವಹಿಸಿದ್ದಾರೆ ಎಂದು ತಿಳಿಸಿದರು.

ಗ್ರಾಪಂ ಗೆಲುವಲ್ಲಿ ಸಚಿವರಾದ ಸೋಮಶೇಖರ್ ಪಾತ್ರ ಗಣನೀಯ : ಪ್ರತಾಪ್ ಸಿಂಹ ಮೈಸೂರು ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಲಾಕ್ ಡೌನಚ ಸಂದರ್ಭದಲ್ಲಿ ಮೃಗಾಲಯದಲ್ಲಿರುವ ಮೂಕ ಪ್ರಾಣಿಗಳಿಗೆ ಬೆಂಗಳೂರಿನಿಂದ 3.65 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿ ಕೊಟ್ಟು ಮಾನವೀಯತೆ ಮೆರೆದಿದ್ದರು. ಈಗ ಸಾಮಾನ್ಯ ಕಾರ್ಯಕರ್ತರ ಚುನಾವಣೆಯಾಗಿದ್ದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅವರ ಗೆಲುವಿಗೆ ತನು-ಮನ-ಧನವನ್ನು ಅರ್ಪಿಸಿ ಬೆಂಬಲವಾಗಿ ನಿಂತು ಗೆಲ್ಲಿಸಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಸಂಸದರಾದ ಪ್ರತಾಪ್ ಸಿಂಹ ಹೇಳಿದರು.

ಸಂಸದರಾದ ಶ್ರೀನಿವಾಸಪ್ರಸಾದ್ ಮಾತನಾಡಿ, ಜನಸೇವಕ ಎಂಬ ಜನಪ್ರತಿನಿಧಿಗಳು ಸಹ ಜನಸೇವಕರು ಎಂದು ಕರೆದಿರುವುದು ಉತ್ತಮ ಬೆಳವಣಿಗೆ. ನಾವು ಇದನ್ನು ಮರೆಯದೇ ಕೆಲಸ ಮಾಡೋಣ. ಶಿಸ್ತಿನ ಪಕ್ಷ ಬಿಜೆಪಿಯಾಗಿದ್ದು, ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಅವರು ಉತ್ತಮ ಸಂಘಟಕರಾಗಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಇಂತಹ ಸಾಧನೆ ಮಾಡಲು ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರೇ ಕಾರಣ ಎಂದು ತಿಳಿಸಿದರು.

ಬಿಜೆಪಿ ಗ್ರಾಮಾಂತರ ಘಟಕದ ಜಿಲ್ಲಾಧ್ಯಕ್ಷರಾದ ಮಂಗಳಾ ಸೋಮಶೇಖರ್ ಮಾತನಾಡಿ, ಶಾಸಕ, ಸಂಸದರ ಆಯ್ಕೆಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಶ್ರಮ ಅಡಗಿದೆ ಎಂಬ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ಮಾತು ನಿಜಕ್ಕೂ ಸತ್ಯ. ಈಗ ಅವರಿಂದಲೇ ಬಿಜೆಪಿ ಇಷ್ಟರಮಟ್ಟಿಗೆ ಬೆಳೆದಿದೆ. ನಾಯಕರನ್ನು ಗೆಲ್ಲಿಸುವ ಕಾರ್ಯಕರ್ತರನ್ನು ಅವರ ಚುನಾವಣೆಯಲ್ಲಿ ನಾಯಕರು ದುಡಿದು ಗೆಲ್ಲಿಸಬೇಕು ಎಂದು ಪಕ್ಷದ ರಾಜ್ಯಾಧ್ಯಕ್ಷರಾದ ಕಟೀಲ್ ಅವರು ಕರೆಕೊಟ್ಟಿದ್ದರು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.

ಸುವರ್ಣ ಗ್ರಾಮ ಯೊಜನೆ ಮುಖಾಂತರ ಗ್ರಾಮಗಳು ಸ್ವರ್ಣಮಯವಾಗಬೇಕು ಎಂದು ಶ್ರಮಿಸುತ್ತಿರುವ, ಮಹಿಳೆಯರು, ಕೃಷಿಕರ ಪರವಾಗಿ ದುಡಿಯುತ್ತಿರುವ ಮುಖ್ಯಮಂತ್ರಿಗಳು, ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಹಾಗೂ ತರುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಮುಂದಿನ ದಿನಗಳಲ್ಲೂ ಕೆಲಸಮಾಡಲಾಗುವುದು ಎಂದು ಮಂಗಳಾ ಸೋಮಶೇಖರ್ ತಿಳಿಸಿದರು.

ಸಚಿವರಾದ ಸೋಮಶೇಖರ್ ಜಿಲ್ಲೆಗೆ ಉಸ್ತುವಾರಿಯಾಗಿರುವುದು ಪುಣ್ಯ; ಮಂಗಳಾ ಸೋಮಶೇಖರ್

ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು, ಕೇವಲ 2 ತಿಂಗಳ ಅವಧಿಯಲ್ಲಿ 1 ನಗರಸಭೆ ಹಾಗೂ 4 ಪಟ್ಟಣ ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸಿದ್ದಲ್ಲದೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮವಹಿಸುತ್ತಿದ್ದಾರೆ. ಇಂಥ ಒಬ್ಬ ಉಸ್ತುವಾರಿ ಸಚಿವರು ಜಿಲ್ಲೆಗೆ ಸಿಕ್ಕಿರುವುದು ಪುಣ್ಯ ಎಂದು ಮಂಗಳಾ ಸೋಮಶೇಖರ್ ಹೇಳಿದರು. ಇಷ್ಟು ಮಂದಿ ಬಿಜೆಪಿ ಕಾರ್ಯಕರ್ತರು ಗೆಲ್ಲಲು ಎಸ್.ಟಿ. ಸೋಮಶೇಖರ್ ಅವರು ಶ್ರಮವಹಿಸಿದ್ದಾರೆ. ಅವರು ಪ್ರತಿ ಶಕ್ತಿಕೇಂದ್ರಗಳಿಗೆ ಭೇಟಿ ಕೊಟ್ಟು ನಾನು ಇದ್ದೇನೆ ಎಂದು ಕಾರ್ಯಕರ್ತರಲ್ಲಿ ಚೈತನ್ಯದ ಚಿಲುಮೆಯನ್ನು ತುಂಬವ ಕೆಲಸವನ್ನು ಅವರು ಮಾಡಿದ್ದಾರೆ. ಅವರ ಕಾರ್ಯವನ್ನು ನಾವು ನೆನೆಯಲೇಬೇಕು ಎಂದು ಮಂಗಳಾ ಸೋಮಶೇಖರ್ ತಿಳಿಸಿದರು.

ಜನಸೇವಕರಿಗೆ ಸನ್ಮಾನ : ಪ್ರಸಕ್ತ ಸಾಲಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತ ಸದಸ್ಯರಿಗೆ ಮುಖ್ಯಮಂತ್ರಿಗಳಾ ಬಿ.ಎಸ್.ಯಡಿಯೂರಪ್ಪ ರವರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರು, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಪುಷ್ಪವೃಷ್ಠಿಗೈಯ್ಯುವ ಮೂಲಕ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಹರ್ಷವರ್ಧನ್, ವಿಧಾನಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್, ಬಿಜೆಪಿ ಎಸ್ ಸಿ ಮೋರ್ಚಾದ ಅಧ್ಯಕ್ಷರಾಗಿರುವ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಎಂ.ರಾಜೇಂದ್ರ, ಬಿಜೆಪಿ ನಗರಾಧ್ಯಕ್ಷರಾದ ಟಿ.ಎಸ್. ಶ್ರೀವತ್ಸ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ವಥ್ ನಾರಾಯಣ, ಮುಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Previous articleಮತ್ತೆ ಲಾಕ್ ಡೌನ್ ಕುರಿತು ಸರ್ಕಾರದ ನಿರ್ಧಾರವೇನು?
Next articleಬೆಂಗಳೂರಿನಲ್ಲಿ ಮತ್ತೆ ಲಾಕ್ ಡೌನ್ ಫಿಕ್ಸ್?!

LEAVE A REPLY

Please enter your comment!
Please enter your name here