Home Cinema ಮಾಯವಾಗಿಬಿಟ್ಟಿದೆ ‘ಕಲ್ಪನಾ ಸಮಾಧಿ’ ಇತಿಹಾಸದ ಪುಟ ಸೇರಿದ ‘ಕಲ್ಪನಾ ಎಸ್ಟೇಟ್’ ಪ್ರಜಾಟಿವಿ ವರದಿಯಲ್ಲಿ ರಿವೀಲ್ ಆಗಿದ್ದೇನು..?

ಮಾಯವಾಗಿಬಿಟ್ಟಿದೆ ‘ಕಲ್ಪನಾ ಸಮಾಧಿ’ ಇತಿಹಾಸದ ಪುಟ ಸೇರಿದ ‘ಕಲ್ಪನಾ ಎಸ್ಟೇಟ್’ ಪ್ರಜಾಟಿವಿ ವರದಿಯಲ್ಲಿ ರಿವೀಲ್ ಆಗಿದ್ದೇನು..?

2491
0
SHARE

ಕಲ್ಪನಾ ಕನ್ನಡ ಚಿತ್ರರಂಗದ ಮಿನುಗುತಾರೆ. ತನ್ನ ಅಭಿನಯದಿಂದ ಎಂಥವ್ರನ್ನೂ ಮಂತ್ರ ಮುಗ್ದಗೊಳಿಸಬಲ್ಲ ಸಾಮರ್ಥ್ಯ ಹೊಂದಿದ್ದ ಕಲ್ಪನಾ ಬದುಕಿದ ರೀತಿ ಇದೆಯಲ್ಲಾ..? ಬದುಕಿನ ಹಾದಿಯಲ್ಲಿ ಎದುರಾದ ಸವಾಲುಗಳೂ ಇವೆಯಲ್ಲಾ..? ಅದು ಖಂಡಿತವಾಗಿಯೂ ಯಾರ ಕಲ್ಪನೆಗೂ ನಿಲುಕದಂಥಹದ್ದು. ಹೌದು, ಕನ್ನಡ ಚಿತ್ರರಂಗದಲ್ಲಿ ಮಿನುಗುತಾರೆಯಾಗಿ ಮಿಂಚಿ ಮರೆಯಾದ ಕಲ್ಪನಾ ಸಿನಿಮಾ ನಟಿಯಾಗಬೇಕೆಂದು ಮದ್ರಾಸ್ ಗೆ ಕಾಲಿಟ್ಟಾಗ ಆಗಿನ್ನೂ ಹದಿನಾರರ ಎಳೆಯ ಪ್ರಾಯ.

ಆಗಿನ್ನೂ ಕಲ್ಪನಾ ಶರತ್ ಲತಾ ಆಗಿದ್ದರು. ಅಂದಿನ ದಿನಗಳಲ್ಲಿ ಕನ್ನಡ ಚಿತ್ರಗಳ ಚಿತ್ರೀಕರಣ ನಡಿತಿದ್ದಿದ್ದು ಮದ್ರಾಸಿನಲ್ಲಿಯೇ. ಹಾಗಾಗಿ, ಮದ್ರಾಸಿಗೆ ಹೋಗಿದ್ದ ಕಲ್ಪನಾಗೆ ಮೊದಲು ಪರಿಚಯವಾಗಿದ್ದೇ ಕನ್ನಡ ಚಿತ್ರರಂಗದ ಹಾಸ್ಯ ಚಕ್ರವರ್ತಿ ನರಸಿಂಹ ರಾಜು. ನರಸಿಂಹ ರಾಜು ಮನೆಯಲ್ಲಿಯೇ ಆಶ್ರಯ ಪಡೆದಿದ್ದ ಕಲ್ಪನಾ ನರಸಿಂಹರಾಜು ಅವ್ರನ್ನೇ ನಂಬ್ಕೊಂಡಿದ್ದರು. ಕಲ್ಪನಾ ನಂಬಿಕೆಗೆ ತಕ್ಕಂತೆ ನರಸಿಂಹರಾಜು ಅವಕಾಶವನ್ನೂ ಕೊಡಿಸಿದರು. ಅಂದಿನ ಪ್ರಸಿದ್ಧ ನಿರ್ದೇಶಕರಾಗಿದ್ದ ಬಿ.ಆರ್.ಪಂತುಲು ಅವರ ಸಹಾಯಕ ನಿರ್ದೇಶಕರಾಗಿದ್ದ ಪುಟ್ಟಣ್ಣ ಕಣಗಾಲ್ ಗೆ ಕಲ್ಪನಾಳನ್ನು ಪರಿಚಯ ಮಾಡಿಕೊಡುತ್ತಾ, “ಇವಳು ನನಗೆ ಗೊತ್ತಿರುವ ಹುಡುಗಿ, ತುಂಬಾ ಚೆನ್ನಾಗಿ ಅಭಿನಯ ಮಾಡ್ತಾಳೆ, ಇವಳಿಗೊಂದು ಅವಕಾಶ ಕೊಡಿ..” ಎಂದು ಹೇಳಿದ್ದರು.

ಹೀಗೆ ನರಸಿಂಹ ರಾಜು ಅವ್ರ ರೆಫರೆನ್ಸ್, ಪುಟ್ಟಣ್ಣ ಕಣಗಾಲ್ ರ ಪ್ರಯತ್ನ ಹಾಗೂ ಎಂ.ವಿ.ರಾಜಮ್ಮನವರ ಬೆಂಬಲದಿಂದಾಗಿ ಪಂತುಲು ತಮ್ಮ “ಸಾಕು ಮಗಳು” ಚಿತ್ರದಲ್ಲಿ ಕಲ್ಪನಾಳಿಗೆ ಮೊಟ್ಟ ಮೊದಲ ಬಾರಿಗೆ ಪ್ರಧಾನ ಪಾತ್ರವನ್ನೇ ಕೊಟ್ಟರು. ಆದರೆ ಒಂದೇ ಮಾತಿನಲ್ಲಿ ಕಲ್ಪನಾಳ ಧ್ವನಿಯನ್ನು ತಿರಸ್ಕರಿಸಿ, “ಈ ಹುಡುಗಿಯ ಕಂಠ ಸರಿಯಿಲ್ಲ, ಕೀರಲಾಗಿದೆ. ಧ್ವನಿಯನ್ನು ಬೇರೆಯವರಿಂದ ಡಬ್ ಮಾಡಿಸಿ” ಎಂದು ಬಿಟ್ಟರು. ಮೊದಲ ಚಿತ್ರ “ಸಾಕು ಮಗಳು” ಪ್ರೇಕ್ಷಕರ ಗಮನವೇನೋ ಸೆಳೆಯಿತು. ಮೊದಲ ಚಿತ್ರದಲ್ಲೇ ನಾಯಕಿಯಾಗಿ ಕಲ್ಪನಾ ಗುರುತಿಸಿಕೊಂಡರು. ಮುಂದಿನದ್ದೆಲ್ಲಾ ಶರವೇಗದಲ್ಲಿ ಆಗುತ್ತದೆ, ಕಲ್ಪನಾಳ ಯಶಸ್ಸಿಗೆ ಇನ್ನು ಅಡೆತಡೆಯಿಲ್ಲ ಎಂದು ಅಂದುಕೊಂಡವರಿದ್ದರು. ಆದರೆ ಆದದ್ದೇ ಬೇರೆ. ಎರಡನೇ ಚಿತ್ರ “ಚಿನ್ನದ ಗೊಂಬೆ” ಯಲ್ಲಿ ನಟಿಸುವ ಅವಕಾಶವೇನೋ ಸಿಕ್ಕಿತು.

ಆದರೆ ಅದು ಪೋಷಕ ಪಾತ್ರದಲ್ಲಿ. ಮೊದಲ ಚಿತ್ರದಲ್ಲೇ ನಾಯಕ ನಟಿಯಾಗಿ ಗುರುತಿಸಿಕೊಂಡ್ರೂ ಎರಡನೇ ಚಿತ್ರದಲ್ಲಿ ಪೋಷಕ ಪಾತ್ರಕ್ಕೇ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂತು. ಮೊದಲ ಚಿತ್ರದಲ್ಲಿ ಕಲ್ಪನಾಳ ಕಂಠ ಸರಿಯಿಲ್ಲ ಎಂದ ಪಂತುಲು, ಎರಡನೇ ಚಿತ್ರದ ಹೊತ್ತಿಗೆ ಇವಳು ನಾಯಕಿಯೇ ಅಲ್ಲ ಎಂದು ಬಿಟ್ಟರು. ಹೀಗೆ ಆರಂಭದಲ್ಲೇ ಕನ್ನಡ ಚಿತ್ರರಂಗದಲ್ಲಿ ಕಲ್ಪನಾ ಅವಮಾನವನ್ನ ಎದುರಿಸಿದರು. ಹಾಗಾಗಿ, ಪಂತಲು ಗರಡಿಯನ್ನ ತೊರೆದು ಕಲ್ಪನಾ ಆಚೆ ಬಂದರು. ಹಾಗಂಥ ಬದುಕು ಸುಸ್ಥಿತಿಯ ಹಂತಕ್ಕೆ ತಲುಪಿರಲಿಲ್ಲ. ಇನ್ನು ಬರ್ಬರವಾದ ಹಂತಕ್ಕೆ ತಲುಪಿತ್ತು. ಇದ್ರ ನಡುವೆ ಕಲ್ಪನಾ ವ್ಯಯಕ್ತಿಕ ಬದುಕಿನ ಬಗ್ಗೆ ತಮಿಳು ಪತ್ರಿಕೆಗಳು ಕೆಟ್ಟಾ ಕೊಳಕಾಗಿ ವರದಿಗಳನ್ನ ಮುದ್ರಣಿಸಿದ್ವು. ಇದೇ ಹೊತ್ತಿನಲ್ಲಿ ಕಲ್ಪನಾ ಬದುಕಿಗೆ ಆಶಾಕಿರಣವಾಗಿದ್ದೇ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣ್ಗಾಲ್.

ಹೌದು, “ನಿನ್ನನ್ನು ಲೋಕವೇ ಕೊಂಡಾಡುವಂತ ದೊಡ್ಡ ತಾರೆಯನ್ನಾಗಿ ಮಾಡುವೆ” ಎಂದು ಅದೇ ಪುಟ್ಟಣ್ಣ ಕಣಗಾಲ್ ಕಲ್ಪನಾಗೆ ಭರವಸೆಯಿತ್ತಿದ್ದರು. ಹೀಗೆ ಕೊಡಲಾಗಿದ್ದ ಭರವಸೆಯ ಬೆನ್ನಲ್ಲಿಯೇ ಪುಟ್ಟಣ್ಣ ಕಣಗಾಲ್ ತಮ್ಮ “ಬೆಳ್ಳಿಮೋಡ” ಚಿತ್ರದಲ್ಲಿ ಕಲ್ಪನಾಳಿಗೇ ಪ್ರಧಾನ ಪಾತ್ರ ಕೊಟ್ಟರು. ಅಸಲಿಗೆ ಬೆಳ್ಳಿ ಮೋಡ ಚಿತ್ರಿಕರಿಸುವಾಗ ಪುಟ್ಟಣ್ಣ ಕಣಗಾಲ್ ರ ಮನದಲ್ಲಿದ್ದದ್ದು ಜಯಂತಿ ಆಗಿತ್ತಂತೆ, ಆದರೆ ಕಲ್ಪನಾಳಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಕಲ್ಪನಾಳನ್ನು ನಾಯಕ ನಟಿಯನ್ನಾಗಿ ಮಾಡಿದರು. ಅಲ್ಲಿಂದ ಮಿನುಗು ತಾರೆ ಅಕ್ಷರಶಃ ಮಿನುಗತೊಡಗಿದಳು. ಕಲ್ಪನಾಳ ನಿಜವಾದ ಯಶಸ್ಸಿನ ಪಯಣ ಶುರುವಾಗಿದ್ದು, “ಮಂತ್ರಾಲಯದ ಮಹಾತ್ಮೆ” ಸಿನಿಮಾದ ನಂತರ. ಈ ಚಿತ್ರ ರಾಜ್ ಕುಮಾರ್ ರ ಜೀವನ ಶೈಲಿಯನ್ನೇ ಬದಲಾಯಿಸಿತು. ಅಷ್ಟೇ ಅಲ್ಲ ಕಲ್ಪನಾಳಿಗೂ ಹಲವಾರು ಅವಕಾಶಗಳು ಹುಡುಕಿಕೊಂಡು ಬಂದವು. ಒಂದಾದ ಮೇಲೊಂದರಂತೆ ಕಾಂಟ್ರಾಕ್ಟುಗಳು ಸಹಿಯಾದವು. ಇದ್ರ ನಡುವೆ ಪುಟ್ಟಣ್ಣ ಕಣ್ಗಾಲ್ ಹಾಗೂ ಕಲ್ಪನಾ ಚಿತ್ರರಂಗದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದರು.

ಬೆಳ್ಳಿ ಮೋಡ, ಕಪ್ಪು ಬಿಳುಪು, ಗೆಜ್ಜೆ ಪೂಜೆ, ಶರಪಂಜರ್ ಚಿತ್ರಗಳೂ ಹೊಸ ಭಾಷ್ಯ ಬರೆದ್ವು. ನೋಡನೋಡುತ್ತಿದ್ದಂತೆ ಕಲ್ಪನಾ ಮಿನುಗುತಾರೆಯೇ ಆಗಿಬಿಟ್ಟರು. ಜನಮಾನಸದಲ್ಲಿ. ಕಲ್ಪನಾಳ ಮೇಲಿದ್ದ ಬಡತನದ ನೆರಳೂ ದೂರಾಯಿತು. ಇದರೊಂದಿಗೆ ಕಲ್ಪನಾ ಮತ್ತು ಪುಟ್ಟಣ್ಣ ಕಣಗಾಲ್ ನಡುವೆ ಬಿರುಕು ಉಂಟಾಯ್ತು. ಶರಪಂಜರ್ ಗೆದ್ದಿದ್ದೇ ನನ್ನ ಅಭಿನಯದಿಂದ ಎಂಬ ಅರ್ಥದಲ್ಲಿ ಕಲ್ಪನಾ ಅಂಹಕಾರದ ಮಾತುಗಳನ್ನಾಡಲು ಶುರುವಿಟ್ಟುಕೊಂಡಿದ್ದರು. ಇದನ್ನ ಸಹಿಸದ ಮೊದಲಿಂದನೂ ಸ್ವಾಭಿಮಾನಿಯಾಗಿದ್ದ ಪುಟ್ಟಣ್ಣ ಆರತಿಯನ್ನ ಕನ್ನಡ ಚಿತ್ರರಂಗದ ಟಾಫ್ ನಾಯಕಿಯನ್ನಾಗಿಸುವ ಪಣ ತೊಟ್ಟಿದ್ದರು. ಅದಾಗಲೇ ತಮ್ಮದೇ ಗೆಜ್ಜೆ ಪೂಜೆ ಚಿತ್ರದ ಮೂಲಕ ಕಾಲಿಟ್ಟಿದ್ದ ಆರತಿಯನ್ನೇ ತಮ್ಮ ಮುಂದಿನ ಚಿತ್ರಗಳ ನಾಯಕಿಯನ್ನಾಗಿಸಿದ್ರು. ಹೀಗೆ ಪುಟ್ಟಣ್ಣ ಹಾಗೂ ಕಲ್ಪನಾ ನಡುವೆ ಹೆಚ್ಚಾದ ಅಂತರ ನಂತ್ರ ಕಡಿಮೆಯಾಗಲಿಲ್ಲ. ಅಷ್ಟರಲ್ಲಿ ಮತ್ತೆ ಒಬ್ಬಂಟಿಯಾಗಿದ್ದ ಕಲ್ಪನಾ ಮತ್ತೊಬ್ಬ ವಿವಾಹಿತ ಬಿ.ಎಸ್.ವಿಶ್ವನಾಥ್ ಗೆ ಮರುಳಾಗಿದ್ದರು. ಅಂದ ಹಾಗೇ ಬಿ.ಎಸ್.ವಿಶ್ವನಾಥ್ ನಟರಾಗಿರಲಿಲ್ಲ, ಸಾಹಿತಿಯಲ್ಲ, ರಾಜಕಾರಣಿಯಲ್ಲ. ಬಟ್, ಎಲ್ಲರಿಗೂ ಬೇಕಾದ ವ್ಯಕ್ತಿ. ಸ್ಪುರದ್ರೂಪಿ. ಹೆಚ್ಚಾಗಿ ವಿವಾಹಿತ.

ಹೀಗಿದ್ದೂ ಕಲ್ಪನಾ ಅದು ಹೇಗೆ ಕಲ್ಪನಾ ವಿಶ್ವನಾಥರಿಗೆ ಮರುಳಾದರು ಅನ್ನುವದು ಇವತ್ತಿಗೂ ಅನೇಕರಲ್ಲಿ ಉಳಿದುಕೊಂಡ ಉತ್ತರವಿರದ ಪ್ರಶ್ನೆಗಳಲ್ಲೊಂದು. ಇನ್ನು, ಕಲ್ಪನಾ ವಿಶ್ವನಾಥರನ್ನು ಗಾಂಧರ್ವ ರೀತಿಯಲ್ಲಿ ವಿವಾಹವಾಗಿದ್ದರು ಎಂದು ಕಲ್ಪನಾ ಆಪ್ತ ಸಹಾಯಕಿ ಚಿನ್ನಮ್ಮ ಹೇಳಿದ ಉದಾಹರಣೆಗಳೂ ಗಾಂಧಿನಗರದಲ್ಲಿವೆ. ನಿಜಾನಾ.. ಸುಳ್ಳಾ.. ಯಾರಿಗೂ ತಿಳಿದಿಲ್ಲವಾದ್ರೂ ವಿಶ್ವನಾಥರೊಂದಿಗಿನ ಸ್ನೇಹವೂ ಬಹಳ ಕಾಲ ಉಳಿಯಲಿಲ್ಲ ಅನ್ನೋದು ಮಾತ್ರ ನಿಜ. ಹಾಗಂಥ, ಬಿ.ಎಸ್.ವಿಶ್ವನಾಥ್ ಅವ್ರಿಗೆ ಕಲ್ಪನಾ ಮೇಲೇ ಪ್ರೀತಿ ಕಮ್ಮಿಯಾಗಿತ್ತಾ..? ಗೊತ್ತಿಲ್ಲ. ಆದ್ರೆ ಕಲ್ಪನಾ ಗೊಟೂರಿನ ಐ.ಬಿ ಯಲ್ಲಿ ವಿಷ ಸೇವಿಸಿ ತೀರಿಕೊಂಡ ನಂತರ ಮಿನುಗುತಾರೆ ಕಲ್ಪನಾ ಅವ್ರನ್ನ ತುಂಬ ಗೌರವದಿಂದ ತಂದುಕೊಂಡು ತಮ್ಮದೇ ತೋಟದಲ್ಲಿ ಸಮಾಧಿ ಮಾಡಿಕೊಂಡಿದ್ದು ಇದೇ ಬಿ.ಎಸ್.ವಿಶ್ವನಾಥ್. ಬಹುಶ, ಕೆಲವು ದಿನ ಒಟ್ಟಿಗೆ ಬಾಳಿದ ನೆನಪಿಗೆಂದೋ ಇನ್ನು ಸಾಯದೇ ಉಳಿದಿದ್ದ ಪ್ರೀತಿಗೆಂದೋ ವಿಶ್ವನಾಥ್ ಕಲ್ಪನಾ ಅವ್ರನ್ನ ಕರೆತಂದಿದ್ದರು.

ತಮ್ಮದೇ ತೋಟದಲ್ಲಿ ಸಮಾಧಿ ಮಾಡಿಕೊಂಡಿದ್ದರು. ಮಿನುಗುತಾರೆ ಇಲ್ಲಿ ಮಲಗಿದ್ದಾರೆ ಎಂದು ಕಲ್ಪನಾ ಸಮಾಧಿ ಮೇಲೆ ಬರೆಸಿದ್ದರು. ಅಂದ ಹಾಗೆ ಅತ್ತ ಆರತಿ ಉತ್ತುಂಗಕ್ಕೇರುವ ಸಮಯದಲ್ಲಿ ಕಲ್ಪನಾ ವ್ಯಾಲ್ಯೂ ಕಡಿಮೆಯಾಗ ತೊಡಗಿತ್ತು. ಕನ್ನಡ ಚಿತ್ರರಂಗ ಕಲ್ಪನಾಳನ್ನು ಕೈ ಬಿಟ್ಟಿತು. ಮಿನುಗುತಾರೆ ಮಂಕಾಗತೊಡಗಿತು. ಕಲ್ಪನಾ ಮೇಲೆ ಸಾಲದ ಹೊರೆ ಬೆಟ್ಟದಷ್ಟಾಯಿತು. ಇತ್ತ ಸಿನಿಮಾ ರಂಗ ಕಲ್ಪನಾಳ ಕೈ ಬಿಟ್ಟಿತ್ತು. ಅತ್ತ ಸಾಲವೂ ಅಧಿಕವಾಗಿತ್ತು. ಇದೆಲ್ಲದರ ಪರಿಣಾಮ ಕಲ್ಪನಾಳನ್ನು ಮತ್ತೆ ನಾಟಕದತ್ತ ಎಳೆದೊಯ್ದಿತು. ಆಗ ಸಿಕ್ಕಿದ್ದೇ ಉತ್ತರ ಕರ್ನಾಟಕದ ನಾಟಕ ಕಂಪನಿಯ ಮಾಲೀಕ ಗುಡಿಗೇರಿ ಬಸವರಾಜು. ಬಹುಶ, ಅವತ್ತು ಸುಮ್ಮನೇ ನಾಟಕದಲ್ಲಿ ಅಭಿನಯಿಸಿ, ಸಂಬಳ ತೆಗೆದುಕೊಂಡು ತನ್ನ ಪಾಡಿಗೆ ಕಲ್ಪನಾ ಇದ್ದಿದ್ದರೆ ಇಂದು ನಮ್ಮೊಡನೆ ಇರುತ್ತಿದ್ದರೇನೋ. ಆದರೆ ಕಲ್ಪನಾ ಗುಡಿಗೇರಿ ಬಸವರಾಜುವಿಗೆ ಮನಸೋತಿದ್ದರು. “ತನ್ನನ್ನು ಎರಡನೇ ಹೆಂಡತಿಯಾಗಿ ಸ್ವೀಕರಿಸು ಬಸೂ..” ಎಂದು ಕಲ್ಪನಾ ಬಸವಾರಜುಗೆ ಗಂಟು ಬಿದ್ದಿದ್ದರು.

ಮೊದ ಮೊದಲು ಬಸವರಾಜು ತಿರಸ್ಕರಿಸಿದರೂ, ನಂತರ ಒಪ್ಪಿಕೊಂಡಿದ್ದರು ಅನ್ನುವ ಮಾಹಿತಿಯೂ ಅನೇಕರು ಕೊಡ್ತಾರೆ. ಇದ್ರ ನಡುವೆ ಬರುಬರುತ್ತಾ ಬಸವರಾಜು ಮತ್ತು ಕಲ್ಪನಾಳ ಮಧ್ಯ ಹಲವಾರು ಭಿನ್ನಾಭಿಪ್ರಾಯಗಳು, ಕಲಹಗಳು, ಹೊಡೆದಾಟ, ಮನಸ್ತಾಪಗಳು ಸಾಮಾನ್ಯವಾಗತೊಡಗಿತು. ಎಷ್ಟರ ಮಟ್ಟಿಗೆ ಅಂದ್ರೆ ಬಸವರಾಜು ಕಲ್ಪನಾ ಸಾಯುವ ಹಿಂದಿನ ದಿನ ಅವಳನ್ನು ಚೆನ್ನಾಗಿ ಬಡಿದಿದ್ದ ಎಂಬ ಸುದ್ದಿಗಳೂ ಆಗೆಲ್ಲಾ ವ್ಯಾಪಕವಾಗಿ ಕೇಳಿ ಬಂದಿದ್ವು. ಅದು 1979 ನೇ ಇಸವಿಯ ಮೇ ತಿಂಗಳು. ಬೆಳಗಾವಿ ಬಳಿಯ ಗೋಟೂರು ಐ.ಬಿ ಯಲ್ಲಿ ಕಲ್ಪನಾ 14 ನಿದ್ದೆ ಮಾತ್ರೆಗಳ ಜೊತೆ ತನ್ನ ವಜ್ರದ ಹರಳಿನ ಉಂಗುರವನ್ನು ಪುಡಿ ಮಾಡಿಕೊಂಡು ಕುಡಿದು ತನ್ನ ಬಣ್ಣದ ಬದುಕಿಗೆ ವಿದಾಯ ಹೇಳಿದ್ದರು. ಅಂತಹ ಮೇರು ನಟಿ. ಅದ್ಭುತ ಅಭಿನೇತ್ರಿ, ಮಿನುಗುತಾರೆ ಹೀಗೆ ದುರಂತವಾಗಿ ತನ್ನ ಜೀವನವನ್ನು ಅಂತ್ಯ ಮಾಡಿಕೊಂಡು ಅನಾಥ ಶವವಾಗಿ ಹೋದರು. ಉಸಿರು ಚೆಲ್ಲುವ ಮುನ್ನ ಪೊಲೀಸರಿಗೆ ಪತ್ರಗಳನ್ನ ಬರೆದಿದ್ದರು. ಹೀಗೆ ಕರ್ನಾಟಕದಲ್ಲಿ ಮನೆ ಮಾತಾಗಿದ್ದ ಮಿನುಗುತಾರೆ ಕಲ್ಪನಾ ಉಸಿರು ಚೆಲ್ಲಿದ್ದರು. ಆಗಲೇ ಹೇಳಿದಂತೆ ಬಿ.ಎಸ್.ವಿಶ್ವನಾಥ್.

ಕಲ್ಪನಾ ಇಹಲೋಕ ತ್ಯಜಿಸಿದ ನಂತರ ಕೆಲವು ದಿನ ಒಟ್ಟಿಗೆ ಬಾಳಿದ ನೆನಪಿಗೆಂದೋ ಇನ್ನು ಸಾಯದೇ ಉಳಿದಿದ್ದ ಪ್ರೀತಿಗೆಂದೋ ವಿಶ್ವನಾಥ್ ಕಲ್ಪನಾ ಅವ್ರನ್ನ ಕರೆತಂದಿದ್ದರು. ತಮ್ಮದೇ ತೋಟದಲ್ಲಿ ಸಮಾಧಿ ಮಾಡಿಕೊಂಡಿದ್ದರು. ಆದ್ರೀಗ ಭರ್ತಿ ನಲವತ್ತು ವರ್ಷಗಳ ಬಳಿಕ ಆ ಸಮಾಧಿ ಇನ್ನು ಇದೆಯಾ..? ಮಿನುಗುತಾರಾ ಇನ್ನು ಅಲ್ಲಿಯೇ ಕದಡದೇ ಮಲಗಿದ್ದಾರಾ..? ಅಲ್ಲಿ ಬೇರೆಯದ್ದೇ ಲೋಕ ತಲೆ ಎತ್ತಿ ನಿಂತತಿದೆ. ಬಿ.ಎಸ್.ವಿಶ್ವನಾಥ್ ಅವರ ತೋಟದಲ್ಲಿ ಕಲ್ಪನಾ ಸಮಾಧಿ ಇದ್ದ ಜಾಗದಲ್ಲಿ ಭವ್ಯವಾದ ಅಪಾರ್ಟ್ಮೆಂಟ್ ತಲೆ ಎತ್ತಿ ನಿಂತಿದೆ. ಒಳಗಡೆ ಹೋಗಿ ಕಲ್ಪನಾ ಸಮಾಧಿಯ ಸ್ಥಿತಿಗೆ ಕೈಗನ್ನಡಿ ಹಿಡಿಯುವ ಪ್ರಯತ್ನಕ್ಕೆ ಮುಂದಾದ್ರೆ ಅಪಾರ್ಟ್ಮೆಂಟ್ ಇರುವ ಆವರಣದ ಒಳಗಡೆ ಮಾಧ್ಯಮದವ್ರ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗುತ್ತಿದೆ. ಇನ್ನು ಅಕ್ಕ ಪಕ್ಕದವ್ರಿಗೆ ವಿಚಾರಿಸಿದ್ರೆ ಕಲ್ಪನಾ ಸಮಾಧಿ ಇರುವ ಸ್ಥಳವನ್ನ ಬಿ.ಎಸ್. ವಿಶ್ವನಾಥ್ ಕುಟುಂಬದವರು ಮಾರಾಟ ಮಾಡಿ ವರ್ಷಗಳೇ ಕಳೆದಿವೆ.

ದೆಹಲಿ ಮೂಲದ ಉದ್ಯಮಿ ತೋಟವನ್ನ ಖರೀದಿಸಿದ್ದಾನೆ ಅನ್ನುವ ಮಾಹಿತಿಯನ್ನೂ ನೀಡುತ್ತಾರೆ. ಕಲ್ಪನಾ ಮಲಗಿದ್ದ ಜಾಗದಲ್ಲಿಯೇ ಅರ್ಪಾರ್ಟ್ಮೆಂಟ್ ಕಟ್ಟಲಾಗಿದೆ ಅನ್ನುತ್ತಾರೆ ಅಲ್ಲಿಯ ಸ್ಥಳಿಯರು. ಇದೆಲ್ಲಾ ಕಾರಣಗಳಿಂದ ಬದುಕಿದ್ದವರೆಗೂ ನಾನಾ ರೀತಿಯ ಕಷ್ಟಗಳನ್ನ ಅನುಭವಿಸಿ ಕಲ್ಪನಾಗೆ ಸತ್ತ ಮೇಲೂ ನೆಮ್ಮದಿ ಇಲ್ಲದಂತಾಯ್ತಾ ಅನ್ನುವ ಪ್ರಶ್ನೆಯೂ ಇದೀಗ ಕಲ್ಪನಾ ಅವ್ರ ಅಭಿನಯ ಮೆಚ್ಚಿಕೊಂಡ ಅನೇಕರಿಗೆ ಕಾಡ್ತಿದೆ.

LEAVE A REPLY

Please enter your comment!
Please enter your name here