Home District ಚಾಮರಾಜನಗರ ಜಿಲ್ಲಾ ಆಸ್ಪತ್ರೆಯ ಕೋವಿಡ್  ಸೋಂಕಿತರನ್ನು ಖುದ್ದಾಗಿ ಭೇಟಿ‌ ಮಾಡಿದ ಸಚಿವ ಸುರೇಶ್ ಕುಮಾರ್

ಚಾಮರಾಜನಗರ ಜಿಲ್ಲಾ ಆಸ್ಪತ್ರೆಯ ಕೋವಿಡ್  ಸೋಂಕಿತರನ್ನು ಖುದ್ದಾಗಿ ಭೇಟಿ‌ ಮಾಡಿದ ಸಚಿವ ಸುರೇಶ್ ಕುಮಾರ್

ಚಾಮರಾಜನಗರ ಜಿಲ್ಲಾ ಆಸ್ಪತ್ರೆಯ ಕೋವಿಡ್  ಸೋಂಕಿತರನ್ನು ಖುದ್ದಾಗಿ ಭೇಟಿ‌ ಮಾಡಿದ ಸಚಿವ ಸುರೇಶ್ ಕುಮಾರ್

313
0

ಸ್ವತಃ ಪಿಪಿಇ ಕಿಟ್ ಧರಿಸಿ ಪ್ರತಿಯೊಬ್ಬರ ಬಳಿ ತೆರಳಿ ಆರೋಗ್ಯ ವಿಚಾರಣೆ; ಭಯ ಬಿಡಿ ನಾನೂ‌ ಕೋವಿಡ್ ಗೆದ್ದು ಬಂದಿದ್ದೇನೆ, ನಿಮಗೂ ಏನೂ ಆಗಲ್ಲ.

ಚಾಮರಾಜನಗರ; ಇಂದು ಜಿಲ್ಲಾಸ್ಪತ್ರೆಗೆ ಮಿಂಚಿನ ಭೇಟಿ ನೀಡಿದ ಸಚಿವ ಸುರೇಶ್‌ಕುಮಾರ್, ವೈಯಕ್ತಿಕ ಆರೋಗ್ಯ ಲೆಕ್ಕಿಸದೇ ತಾವೇ ಸ್ವತಃ ಪಿಪಿಇ ಕಿಟ್ ಧರಿಸಿ ಕೋವಿಡ್ ವಾರ್ಡಿನೊಳಗೆಲ್ಲಾ ಓಡಾಡಿದರು. ಅಲ್ಲಿ ಜಿಲ್ಲಾಡಳಿತ ಪೂರೈಸಿರುವ ವ್ಯವಸ್ಥೆಯನ್ನು ಖುದ್ದಾಗಿ ಪರಾಮರ್ಶಿಸಿದ ಸಚಿವರು ಎಲ್ಲ‌‌ ಜಾಗರೂಕತಾ‌ ಕ್ರಮಗಳ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಯಾವುದೇ ಸಮಸ್ಯೆಗಳಾಗದ ರೀತಿಯಲ್ಲಿ ಕೆಲಸ‌ ಮಾಡಬೇಕೆಂದು ನಿರ್ದೇಶನ ನೀಡಿದರು.

ಇಂದು 167 ಕೋವಿಡ್ ಸೋಂಕಿತರು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 26 ಜನ ವೆಂಟಿಲೇಟರ್ ಮೇಲಿದ್ದಾರೆ. ಐಸಿಯು ವಾರ್ಡ್ ನಲ್ಲಿ 47 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.  ಸಚಿವರೇ ಪ್ರತಿಯೊಬ್ಬರನ್ನೂ ಖುದ್ದಾಗಿ ಭೇಟಿ ಮಾಡಿ ಬಂದು ಎಷ್ಟು ದಿನ ಆಯ್ತು? ಅವತ್ತಿಗೂ ಇವತ್ತಿಗೂ ಹೇಗಿದ್ದೀರಿ? ಊಟ ಮಾಡಿದರಾ? ವೈದ್ಯರು‌ ನಿಮ್ಮನ್ನು ಚೆನ್ನಾಗಿ‌ ನೋಡ್ಕೊಳ್ತಿದಾರಾ? ಸಕಾಲಕ್ಕೆ ಆರೈಕೆ ದೊರೆಯುತ್ತಿದೆಯಾ? ಸಮಸ್ಯೆ ಆದ ತಕ್ಷಣ‌ ಪರಿಹಾರಕ್ಕೆ ಪ್ರಯತ್ನ ನಡೀತಿದೆಯಾ? ಎಂದು‌ ಪ್ರಶ್ನಿಸಿ ಎಲ್ಲರನ್ನೂ ಶೀಘ್ರ ಗುಣಮುಖರಾಗಲು ಹಾರೈಸಿದರು.

ನಾನೂ ಕೋವಿಡ್ ಸೋಂಕಿಗೊಳಗಾಗಿದ್ದೆ; ಕೆಲವು ಸೋಂಕಿತರ ಆಮ್ಲಜನಕ ಸಂಪೂರ್ಣತೆಯನ್ನು (Oxygen saturation) ವೈದ್ಯಾಧಿಕಾರಿಗಳ ಸಹಾಯದೊಂದಿಗೆ ತಾವೇ‌ ಖುದ್ದಾಗಿ ಪರೀಕ್ಷಿಸಿದ ಸುರೇಶ್ ಕೆಲ ತಿಂಗಳ ಹಿಂದೆ‌ ನಿಮ್ಮ ಥರ ನಾನೂ ಕೋವಿಡ್ ಸೋಂಕಿತನಾಗಿದ್ದೆ. ನನ್ನ ಶ್ವಾಸಕೋಶವೂ ತೀವ್ರವಾದ ಸೋಂಕಿಗೊಳಗಾಗಿತ್ತು.  ನಾವೆಲ್ಲ ಕೊರೋನಾ ವಾರಿಯರ್ ಗಳೇ. ದಿಟ್ಟವಾಗಿ ಇದನ್ನು ಎದುರಿಸೋಣ. ಧೃತಿಗೆಡದಿದ್ದರೆ‌ ಅದು ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಹುರಿದುಂಬಿಸಿದರು.

ಕೋವಿಡ್ ಸೋಂಕಿತ ಬಾಣಂತಿ ಮಗು ಭೇಟಿ; ಕೋವಿಡ್ ಪೀಡಿತ ಮಹಿಳೆಗೆ ಇಂದು ಬೆಳಗ್ಗೆಯಷ್ಟೇ ಹೆರಿಗೆಯಾಗಿದ್ದು, ತಾಯಿ ಮಗುವನ್ನೂ ಸಹ ಸುರೇಶ್ ಕುಮಾರ್ ಭೇಟಿ ಮಾಡಿ ಕೋವಿಡ್ ಸಂದರ್ಭದಲ್ಲಿ ಮಗು ಜನಿಸಿದೆ. ಒಳ್ಳೆ ಹೆಸರಿಡಿ ಎಂದು‌ ಹೇಳಿ ತಾಯಿಯ ಮುಖದ ಮೇಲೆ ವಿಶ್ವಾಸದ ನಗೆಯನ್ನು ತುಂಬಿದರು.

ಸರ್ಕಾರಿ ನೌಕರರು, ಶಿಕ್ಷಕರು‌ ಸೇರಿದಂತೆ ನೂರಾರು ಸಾರ್ವಜನಿಕರು ಕೋವಿಡ್ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಸಮರ್ಪಕ ಸೌಲಭ್ಯಗಳು ದೊರೆಯುತ್ತಿರುವ ಬಗ್ಗೆ ಅವರೆಲ್ಲರಿಂದ ಸಚಿವ ಸುರೇಶ್ ಕುಮಾರ್ ಖಚಿತ ಪಡಿಸಿಕೊಂಡ ಸಚಿವರು ಕೋಣೆಯೊಂದರಲ್ಲಿ ವಾಷ್ ರೂಂ ಸ್ವಚ್ಛ ಮಾಡಬೇಕೆಂದು ರೋಗಿಯೊಬ್ಬರು ಗಮನಕ್ಕೆ ತಂದಾಗ ಈ ಬಗ್ಗೆ ಕೂಡಲೇ ಸಮಸ್ಯೆ ಸರಿಪಡಿಸಲು ವೈದ್ಯಕೀಯ‌ ನಿರ್ದೇಶಕರಿಗೆ ಸೂಚನೆ‌ ನೀಡಿದರು.

*ನ್ಯಾಯಾಧೀಶರ ನೇತೃತ್ವದ ವಿಚಾರಣಾ ಆಯೋಗ; ಚಾಮರಾಜನಗರ ಜಿಲ್ಲಾಸ್ಪತ್ರೆಯ ಘಟನೆ ತಮಗೆ ಅತ್ಯಂತ ವೇದನೆ‌ ತಂದಿದ್ದು, ಇಂತಹ ಸಂದರ್ಭ ಮರುಕಳಿಸದೇ‌ ಇರುವ ನಿಟ್ಟಿನಲ್ಲಿ ತಾವು ಎಲ್ಲ ಕ್ರಮಗಳಿಗೆ ಬದ್ಧ ಎಂದು ಪ್ರತಿಯೊಬ್ಬ ಸೋಂಕಿತರಿಗೆ ವಿಶ್ವಾಸ ತುಂಬಿದ ಸಚಿವರು ಯಾವುದೇ ಸೋಂಕಿತರು ಅಧೈರ್ಯಕ್ಕೊಳಗಾಗದಿರಿ, ಸರ್ಕಾರ‌ ನಿಮ್ಮ‌ ಬೆನ್ನಿಗಿದೆ. ನೀವು ಇಟ್ಟ ವಿಶ್ವಾಸಕ್ಕೆ ಯಾವ ಸಂದರ್ಭದಲ್ಲಿಯೂ ಧಕ್ಕೆಯಾಗುವುದಿಲ್ಲ. ವ್ಯವಸ್ಥೆಯ ಬಗ್ಗೆ ನಂಬಿಕೆಯಿರಲಿ ಎಂದು ಧೈರ್ಯ ತುಂಬಿದರು.

ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ; ಅಧಿಕಾರಿಗಳನ್ನುದ್ದೇಶಿಸಿದ‌ ಮಾತನಾಡಿದ ಸಚಿವರು ಮೊನ್ನೆ ನಡೆದ ದುರ್ಘಟನೆಗೆ ಸಂಬಂಧಿಸಿದಂತೆ ಸರ್ಕಾರ‌ ನಿವೃತ್ತ ನ್ಯಾಯಾಧೀಶರಾದ ಜ.ಪಾಟೀಲ್ ಅವರ ನೇತ್ವತ್ವದಲ್ಲಿ ಇಂದು ವಿಚಾರಣಾ ಆಯೋಗ ಸ್ಥಾಪಿಸಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಣ್ಯವಾದ ಕ್ರಮವನ್ನು ಖಚಿತವಾಗಿಯೂ ಸರ್ಕಾರ ತೆಗೆದುಕೊಳ್ಳಲಿದೆ. ಇದೊಂದು ಎಚ್ಚರಿಕೆಯ ಗಂಟೆಯಾಗಬೇಕು. ಎಲ್ಲರೂ ಜವಾಬ್ದಾರಿಯನ್ನರಿತು ಶ್ರಮ ವಹಿಸಿ ಸಾರ್ವಜನಿಕ ಸೇವೆ ಮಾಡಬೇಕು ಎಂದು ಸೂಚನೆ ನೀಡಿದರು.

ಇಂದು ಸಚಿವರ ಮಿಂಚಿನ ಭೇಟಿಯಲ್ಲಿ‌ ಅವರೊಂದಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸಂಜೀವ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರವಿ, ನೋಡಲ್ ಅಧಿಕಾರಿ ಡಾ.ಮಹೇಶ್ ಸೇರಿದಂತೆ ಹಲವರು ಇದ್ದರು.

VIAಚಾಮರಾಜನಗರ ಜಿಲ್ಲಾ ಆಸ್ಪತ್ರೆಯ ಕೋವಿಡ್  ಸೋಂಕಿತರನ್ನು ಖುದ್ದಾಗಿ ಭೇಟಿ‌ ಮಾಡಿದ ಸಚಿವ ಸುರೇಶ್ ಕುಮಾರ್
SOURCEಚಾಮರಾಜನಗರ ಜಿಲ್ಲಾ ಆಸ್ಪತ್ರೆಯ ಕೋವಿಡ್  ಸೋಂಕಿತರನ್ನು ಖುದ್ದಾಗಿ ಭೇಟಿ‌ ಮಾಡಿದ ಸಚಿವ ಸುರೇಶ್ ಕುಮಾರ್
Previous articleಕೆಲಸದಲ್ಲಿ ಇಷ್ಠವಿಲ್ಲದ ಸಚಿವರು ರಾಜೀ‌ನಾಮೆ ಕೊಟ್ಟು ಮನೆಗೆ ಹೋಗಿ; ರೇಣುಕಾಚಾರ್ಯ ವಾಗ್ದಾಳಿ
Next articleಹೇಳುವುದು ಒಂದು ಮಾಡುವುದು ಇನ್ನೊಂದು; ರೂಲ್ಸ್ ಬ್ರೇಕ್ ಸಂಸದೆ ಯಾರು ಗೊತ್ತೇ!

LEAVE A REPLY

Please enter your comment!
Please enter your name here