ರಾಜ್ಯದಲ್ಲಿ ನಿಲ್ಲದ ಡೆಡ್ಲಿ ವೈರಸ್ ಅಟ್ಟಹಾಸ..‍! ಆಕ್ಸಿಜನ್, ಬೆಡ್‌ಗಾಗಿ ಸೋಂಕಿತರ ನರಳಾಟ..!

389
0

-ವರದಿ: ಪ್ರಕಾಶ್, ಹಿರಿಯ ವರದಿಗಾರರು

ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮೆರೆದಿದೆ. ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಚಿಕಿತ್ಸೆಗಾಗಿ ಸೋಂಕಿತರು ಪರದಾಟ ನಡೆಸಿದ್ದಾರೆ. ದಿನಂಪ್ರತಿ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸರ್ಕಾರ ಸಮಸ್ಯೆ ಪರಿಹರಿಸಲು ಹರಸಾಹಸ ಪಡುತ್ತಿದೆ. ಮೈಸೂರಿನ ಕೆ.ಆರ್.ಆಸ್ಪತ್ರೆಯ ನಾಲ್ವರು ವೈದ್ಯರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಆಸ್ಪತ್ರೆ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದಾರೆ. ಇತ್ತ ಕೊರೊನಾಕ್ಕೆ ಸಂಸದ ಶ್ರೀನಿವಾಸ್ ಪ್ರಸಾದ್ ಆಪ್ತ ಸಹಾಯಕ ಶಂಕರ್ ಮೃತಪಟ್ಟಿದ್ದಾರೆ. ಮೃತ ಶಂಕರ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇತ್ತ ಮಾಸ್ಕ್ ಇಲ್ಲದೇ ಮೈಸೂರಿಗರೂ ಹೊರ ಬಂದ್ರ ದಂಡ ಕಟ್ಟಿಟ್ಟ ಬುತ್ತಿಯಾಗಿದೆ. ಮೈಸೂರಿನಲ್ಲಿ ಮಾಸ್ಕ್ ಕಾರ್ಯಾಚರಣೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ಡಿ.ಪಾಳ್ಯ ಗ್ರಾಮದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ.ಡಿ.ಪಾಳ್ಯ ಗ್ರಾಮಸ್ಥರು ಸೆಲ್ಫ್ ಲಾಕ್ ಡೌನ್ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿ 24 ಜನರಿಗೆ ಪಾಸಿಟಿವ್ ದೃಢವಾಗಿ ಇಬ್ಬರು ಸಾವನ್ನಪ್ಪಿದ್ರು ಹೀಗಾಗಿ ಗ್ರಾಮಸ್ಥರು ಲಾಕ್ ಡೌನ್ ನಿರ್ಣಯ ಕೈಗೊಂಡಿದ್ದಾರೆ.

ಕೋವಿಡ್ ಪರೀಕ್ಷೆ ಬೆನ್ನಲ್ಲೆ ಕುಸಿದು ಬಿದ್ದು ವೃದ್ದ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ ನಡೆದಿದೆ. ಅನಾರೋಗ್ಯದ ಹಿನ್ನಲೆ ಸರ್ಕಾರಿ‌ ಆಸ್ಪತ್ರೆಗೆ ತೆರಳಿದ್ದ ವೃದ್ಧನಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಆತಂಕಕ್ಕೆ ಒಳಗಾಗಿದ್ದ ವೃದ್ಧ ಮನೆ ತಲುಪುತ್ತಲೇ ಪ್ರಾಣ ಬಿಟ್ಟಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಅಬ್ಬರ ಹೆಚ್ಚಾಗಿದೆ. ಜಿಲ್ಲಾಡಳಿತ ಕಂಟೈನಮೆಂಟ್ ಜೋನ್ ಪ್ರಾರಂಭಿಸಿದೆ. ನಗರದ 11 ಕಡೆ ಮೈಕ್ರೋ ಕೈಂಟೈನಮೆಂಟ್ ಜೋನ್ ಆರಂಭವಾಗಿದೆ. ಐದಕ್ಕೂ ಹೆಚ್ಚು ಸೋಂಕಿತರು ಪತ್ತೆಯಾದ್ರೆ ಆ ಏರಿಯಾ ಮೈಕ್ರೋ ಕಂಟೈನಮೆಂಟ್ ಜೋನ್ ಆಗಿ ಪರಿವರ್ತನೆ ಮಾಡಲಾಗಿದೆ.

ಗಡಿ ಜಿಲ್ಲೆ ಬೀದರ ನಲ್ಲಿ ಕೊರೊನಾಂತಕ ಹೆಚ್ಚಾಗಿದೆ. ಬಾವಗಿ ಗ್ರಾಮಸ್ಥರು, ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ನಿರ್ಧಾರ ಮಾಡಿದ್ದಾರೆ. ಅಂಗಡಿ , ಹೋಟೆಲ್‌ಗಳನ್ನು ಬಂದ್ ಮಾಡಿ, ಗುಂಪು ಸೇರುವಿಕೆಯನ್ನೂ ನಿಷೇಧಿಸಿದ್ದಾರೆ. ಇನ್ನು ಕೋಲಾರದ ಲಕ್ಷ್ಮಿಸಾಗರ ಗ್ರಾಮದಲ್ಲಿ ಕೊರೋನ‌‌ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಅಧಿಕಾರಿಗಳು ಗ್ರಾಮವನ್ನು ಸೀಲ್ ಡೌನ್ ಮಾಡಿದ್ದಾರೆ. ಗ್ರಾಮಸ್ಥರು ತಮಗೆ ತಾವೇ ನಿರ್ಭಂದ‌ ಹೇರಿಕೊಂಡಿದ್ದಾರೆ. ಸೋಂಕು ಹರಡದಂತೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿದೆ.

ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಕೋಳಿ ಪಾಳ್ಯ ಗ್ರಾಮದ ಆರೋಗ್ಯ ಉಪ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಇದೇವೇಳೆ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲ. ಜಿಲ್ಲೆಯ 45ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ ಎಂದು ಡಿಸಿ ರವಿ ಮನವಿ ಮಾಡಿದ್ರು. ಚಳ್ಳಕೆರೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳ ಹಿನ್ನಲೆಯಲ್ಲಿ ನಗರಾಡಳಿತ ಬಿಗಿ ಕ್ರಮ ಕೈಗೊಂಡಿದೆ. ಮಾಸ್ಕ್ ಧರಿಸದೆ ಹೊರ ಬರುವವರಿಗೆ ದಂಡ ಹಾಕಲಾಗುತ್ತಿದೆ. ಬೇರೆ ಊರುಗಳಿಂದ ಆಗಮಿಸುವವರ ಮೇಲೆ ನಿಗಾ ವಹಿಸಲಾಗಿದೆ. ನಗರದ ಎಲ್ಲಾ ವಾರ್ಡ್ ಗಳಿಗೆ ಸ್ಯಾನಿಟೈಸರ್ ಸಿಂಪಡಿಸಲಾಗಿದೆ. ಗದಗ ಜಿಲ್ಲಾಡಳಿತ ವತಿಯಿಂದ ಮಾಸ್ಕ್ ಜಾಗೃತಿ ಮಹಾ ಅಭಿಯಾನ ನಡೆಸಲಾಯಿತು. ನಗರದ ಜನನಿಬಿಡ ಪ್ರದೇಶದಲ್ಲಿ ಜಾಗೃತಿ ಮೂಡಿಸಲಾಗಿದೆ. ಮಾಸ್ಕ್ ಹಾಕದೆ ಹೊರ ಬಂದವರಿಗೆ ದಂಡ ಹಾಕಲಾಗಿದೆ.ಮಾಸ್ಕ್ ಜಾಗೃತಿ ಅಭಿಯಾನಕ್ಕೆ ಅಧಿಕಾರಿಗಳು ಸಾಥ್ ನೀಡಿದರು ಎಂದು ಪೌರಾಯುಕ್ತ ಪಾಲಯ್ಯ ತಿಳಿಸಿದ್ದಾರೆ.

Previous articleನೇಕಾರರಿಗೆ ಸರ್ಕಾರದಿಂದ ಸ್ಪೆಷಲ್ ಗಿಫ್ಟ್!
Next article‘ಲಾಕ್ ಡೌನ್’ ಕುರಿತು ಡಿಕೆಶಿ ಹೇಳಿದ್ದೇನು?

LEAVE A REPLY

Please enter your comment!
Please enter your name here