ಚಂಡಮಾರುತ ಅವಾಂತರ; ಅಲೆಗಳ ಅಬ್ಬರ ಹೆಚ್ಚಾಗಿ ಮನೆಗಳಿಗೆ ನುಗ್ಗಿದ ನೀರು!

ಚಂಡಮಾರುತ ಅವಾಂತರ; ಅಲೆಗಳ ಅಬ್ಬರ ಹೆಚ್ಚಾಗಿ ಮನೆಗಳಿಗೆ ನುಗ್ಗಿದ ನೀರು!

477
0

ವರದಿ:ಸಂದೀಪ ಸಾಗರ, ಕಾರವಾರ.

ರಾಜ್ಯದ ಕರಾವಳಿಯಲ್ಲಿ ಶನಿವಾರ ತೌಕ್ತೆ ಚಂಡಮಾರುತದ ಪ್ರಭಾವ ಜನಜೀವನವನ್ನೆ ತಲ್ಲಣಗೊಳಿಸಿದೆ. ಉತ್ತರಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಚಂಡಮಾರುತ ಅಪ್ಪಳಿಸಿದ ಪರಿಣಾಮ ಭಾರೀ ಗಾಳಿ, ಮಳೆಯಾಗಿದ್ದು ಇನ್ನೊಂದೆಡೆ ಅಲೆಗಳ ಅಬ್ಬರ ಹೆಚ್ಚಾಗಿ ಹಲವೆಡೆ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಅವಾಂತರವನ್ನೇ ಸೃಷ್ಟಿ ಮಾಡಿದ್ದು ಈ ಕುರಿತು ಒಂದು ವರದಿ ಇಲ್ಲಿದೆ.

ವಾ.ಓ.01: ರಾಜ್ಯದ ಕರಾವಳಿ ಭಾಗದಲ್ಲಿ ಇಂದು ತೌಕ್ತೆ ಚಂಡಮಾರುತ ಅಪ್ಪಳಿಸಿ ಸಾಕಷ್ಟು ಅನಾಹುತವನ್ನ ಸೃಷ್ಟಿ ಮಾಡಿದೆ. ನಿನ್ನೆ ರಾತ್ರಿಯಿಂದಲೇ ಜಿಲ್ಲೆಯ ಕರಾವಳಿ ಭಾಗದಲ್ಲಿ ಕೆಲವೆಡೆ ಮಳೆ ಸುರಿಯಲಾರಂಭಿಸಿತ್ತು. ಆದರೆ ಇಂದು ಬೆಳಿಗ್ಗೆಯಿಂದಲೇ ಅಲೆಗಳು ಕೂಡ ರೌದ್ರಾವತಾರ ತಾಳಿದ್ದು, ಕಡಲಂಚಿನ ಅನೇಕ ಗ್ರಾಮಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕಡಲಂಚಿನ ಗ್ರಾಮಗಳ ಮನೆಗಳ ನಿವಾಸಿಗಳು ಮನೆಗಳಿಗೆ ನೀರು ನುಗ್ಗಿದ್ದರಿಂದ ಪರದಾಡುವಂತಾಗಿದೆ. ಜಿಲ್ಲೆಯ ಕಾರವಾರ ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಬಹುತೇಕ ಎಲ್ಲಾ ಕಡಲತೀರಗಳು ರೌದ್ರಾವತಾರ ತಾಳಿದ್ದು, ಮುರ್ಡೇಶ್ವರದ ಮುಖ್ಯ ಕಡಲತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿ ಕಡಲ ತೀರದಲ್ಲಿ ನಿಲ್ಲಿಸಿದ್ದ ಗೂಡಂಗಡಿಗಳು ನೀರುಪಾಲಾಗಿದೆ. ಇನ್ನು ಚಂಡಮಾರುತ ಹಿನ್ನಲೆಯಲ್ಲಿ ಮೀನುಗಾರಿಕೆ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ ಹಿನ್ನಲೆ ಬಹುತೇಕ ಬಂದರುಗಳಲ್ಲಿ ಮೀನುಗಾರರು ಮೀನುಗಾರಿಕೆ ಮಾಡದೇ ಬೋಟ್ ಗಳನ್ನ ಲಂಗರು ಹಾಕಿ ನಿಲ್ಲಿಸಿದ್ದಾರೆ. ಇನ್ನು ಕೆಲವೆಡೆ ಕಡಲತೀರದಲ್ಲಿ ಇಟ್ಟಿದ್ದ ದೋಣಿಗಳು ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿದ್ದು, ದೋಣಿ ಬಲೆಗಳ ರಕ್ಷಣೆಗೆ ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಇನ್ನು ಜಿಲ್ಲೆಯ ಭಟ್ಕಳ ತಾಲೂಕಿನ ಜಾಲಿಕೋಡಿ ಸಮುದ್ರ ತೀರದಲ್ಲಿ ಗುರುವಾರ ಲಂಗರು ಹಾಕಿದ್ದ ದೋಣಿಯನ್ನು ಸಮುದ್ರದ ಅಲೆಗಳಿಂದ ರಕ್ಷಣೆ ಮಾಡಲು ಹೋಗಿದ್ದ ಲಕ್ಷ್ಮಣ ನಾಯ್ಕ ಎನ್ನುವ ಮೀನುಗಾರನಿಗೆ ಇನ್ನೊಂದು ದೋಣಿ ಬಡಿದಿದ್ದು, ಎರಡು ದೋಣಿಗಳ ನಡುವೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಇದಲ್ಲದೇ ಕಾರವಾರ ತಾಲೂಕಿನ ಮಾಜಾಳಿ, ಮುದಗಾ, ಅಂಕೋಲಾ ತಾಲೂಕಿನ ಬಿಳಿಹೋಯ್ಗಿ, ಕೇಣಿ, ಹಾರವಾಡ, ಕುಮಟಾ ತಾಲೂಕಿನ ವನ್ನಳ್ಳಿ, ಗೋಕರ್ಣ ಹೊನ್ನಾವರ ತಾಲೂಕಿನ ಅಪ್ಸರಕೊಂಡ, ಮಂಕಿ ಪಾವಿನ ಕುರ್ವಾ, ಭಟ್ಕಳ ತಾಲೂಕಿನ ಜಾಲಿ, ಕರಿಕಲ್, ತೆಂಗಿನಗುಂಡಿ, ಮಾವಿನಕುರ್ವ ಸೇರಿದಂತೆ ಹಲವು ಗ್ರಾಮದಲ್ಲಿ ಕಡಲತೀರ ರೌದ್ರಾವತಾರ ತೋರಿದ ಹಿನ್ನಲೆ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇನ್ನು ಕಾರವಾರ ತಾಲೂಕಿನ ಠಾಗೋರ್ ಕಡಲತೀರದಲ್ಲೂ ಅಲೆಗಳ ಅಬ್ಬರ ಅಧಿಕವಾಗಿ ಹೊರಜಿಲ್ಲೆಯ ಮೀನುಗಾರಿಕಾ ಬೋಟುಗಳೂ ಸಹ ಕಾರವಾರ ಬಂದರು ಪ್ರದೇಶದಲ್ಲಿ ರಕ್ಷಣೆ ಪಡೆದುಕೊಂಡಿದ್ದಾರೆ.

ಒಟ್ಟಾರೆಯಾಗಿ ಜನರ ಜೀವವನ್ನೆ ಹಿಂಡುತ್ತಿರುವ ಕೊರೊನಾ ಆತಂಕದಲ್ಲಿ ದಿನ ಕಳೆಯುತ್ತಿದ್ದ ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದ ಜನರಿಗೆ ಇದೀಗ ತೌಕ್ತೆ ಚಂಡಮಾರುತ ಮತ್ತಷ್ಟು ಭೀತಿ ಹುಟ್ಟಿಸಿದೆ. ಸದ್ಯ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಆತಂಕ ಇನ್ನಷ್ಟು ಹೆಚ್ಚಾಗಿದ್ದು, ಕರಾವಳಿ ತೀರದ ಜನರು ಜಾಗೃತಿವಹಿಸುವ ಅನಿವಾರ್ಯತೆ ಇದ್ದು ಇನ್ನೂ ಒಂದೆರಡು ದಿನ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎನ್ನಲಾಗಿದೆ.

VIAಚಂಡಮಾರುತ ಅವಾಂತರ; ಅಲೆಗಳ ಅಬ್ಬರ ಹೆಚ್ಚಾಗಿ ಮನೆಗಳಿಗೆ ನುಗ್ಗಿದ ನೀರು!
SOURCEಚಂಡಮಾರುತ ಅವಾಂತರ; ಅಲೆಗಳ ಅಬ್ಬರ ಹೆಚ್ಚಾಗಿ ಮನೆಗಳಿಗೆ ನುಗ್ಗಿದ ನೀರು!
Previous articleಕೊರೋನಾ ಮಹಾಮಾರಿಗೆ ಕಂಗೆಟ್ಟ ಸಾರಿಗೆ ನೌಕರರು
Next articleಚಾಮರಾಜನಗರ ಜಿಲ್ಲೆಯಲ್ಲಿ ಮುಂದುವರೆದ ಕೋರೊನಾ ರಣಕೇಕೆ!

LEAVE A REPLY

Please enter your comment!
Please enter your name here