ವಿದೇಶದಿಂದ ಹಿಂದಿರುಗಿದವರನ್ನು ಸ್ಪರ್ಶಿಸಬೇಡಿ: ಚೀನಾ ಸರ್ಕಾರ ಸೂಚನೆ

ಅಂತರಾಷ್ಟ್ರೀಯ

ಬೀಜಿಂಗ್: ಕೋವಿಡ್ ಸೋಂಕಿನ ಬಳಿಕ ಇತ್ತೀಚೆಗೆ ಮಂಕಿಪಾಕ್ಸ್ ಸೋಂಕು ಹೆಚ್ಚಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ವಿದೇಶದಿಂದ ಇತ್ತೀಚೆಗೆ ಹಿಂದಿರುಗಿದವರ ಸಂಪರ್ಕದಿಂದ ದೂರವಿರಲು ನಾಗರಿಕರಿಗೆ ಚೀನಾದ ಉನ್ನತ ಆರೋಗ್ಯ ಅಧಿಕಾರಿಯೊಬ್ಬರು ಸೂಚನೆ ನೀಡಿದ್ದಾರೆ.

ವಿದೇಶದಿಂದ ಆಗಮಿಸಿದ್ದ ವ್ಯಕ್ತಿಯು ಕೊರೊನಾ ಕ್ವಾರಂಟೈನ್‍ನಲ್ಲಿರುವಾಗ ಆತನಿಗೆ ಮಂಕಿಪಾಕ್ಸ್‌ನ ಕೆಲ ಲಕ್ಷಣಗಳು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಚೀನಾ ಚಾಂಗ್‍ಕಿಂಗ್ ನಗರದಲ್ಲಿ ಮಂಕಿಪಾಕ್ಸ್‌ನ ಮೊದಲ ಪ್ರಕರಣ ವರದಿ ಆಗಿದೆ.

ಈ ಹಿನ್ನೆಲೆಯಲ್ಲಿ ಚೀನಾ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಅಲ್ಲಿನ ನಾಗರಿಕರಿಗೆ ಸೂಚಿಸಿದೆ. ಮಂಕಿಪಾಕ್ಸ್ ಸೋಂಕು ದೇಶಾದ್ಯಂತ ಹರಡುವುದನ್ನು ತಪ್ಪಿಸಲು ವಿದೇಶಿಗರನ್ನು ಹಾಗೂ ಕಳೆದ ಮೂರು ವಾರಗಳ ಹಿಂದೆ ವಿದೇಶದಿಂದ ಹಿಂದಿರುಗಿದವರನ್ನು ಸ್ಪರ್ಶಿಸಬಾರದು. ಅಪರಿಚಿತರನ್ನು ಸ್ಪರ್ಶಿಸಬೇಡಿ, ಹೋಟೆಲ್‍ ಸೇರಿದಂತೆ ಸಾರ್ವಜನಿಕ ಸೌಲಭ್ಯಗಳನ್ನು ಹೆಚ್ಚು ಬಳಸಬೇಡಿ, ಸಾರ್ವಜನಿಕ ಶೌಚಾಲಯವನ್ನು ಬಳಸುವಾಗ ಟಾಯ್ಲೆಟ್ ಸೀಟ್‍ ಮೇಲೆ ಕವರನ್ನು ಬಳಸಲು ಸೂಚನೆ ನೀಡಿದೆ.

ಚೀನಾದ ಈ ಸಲಹೆಗೆ ಚೀನೀಯರಿಂದಲೇ ವಿರೋಧ ವ್ಯಕ್ತವಾಗಿದ್ದು, ಜನಾಂಗೀಯ ತಾರತಮ್ಯವನ್ನು ಅನುಸರಿಸುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ.