ಮೋದಿಯನ್ನು ಹೊಗಳಿ, ನವಾಜ್ ಷರೀಫ್ ವಿರುದ್ಧ ವಾಗ್ದಾಳಿ ನಡೆಸಿದ ಪಾಕ್ ಮಾಜಿ ಪ್ರಧಾನಿ

ಬೆಂಗಳೂರು

ಇಸ್ಲಾಮಾಬಾದ್: ಭ್ರಷ್ಟಾಚಾರದ ವಿಚಾರದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ಹೊಗಳಿದ್ದು,  ಇದೇ ವೇಳೆ ಪಾಕಿಸ್ತಾನ್ ಮುಸ್ಲಿಂ ಲೀಗ್ ಮುಖ್ಯಸ್ಥ ನವಾಜ್ ಷರೀಫ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಾಜಿ ಪ್ರಧಾನಿ ಖಾನ್, ಪಾಕಿಸ್ತಾನದ ಹೊರಗೆ ನವಾಜ್ ಷರೀಫ್ ಹೊಂದಿರುವ ಆಸ್ತಿಗಳ ಬಗ್ಗೆ ಮಾತನಾಡಿದ್ದಾರೆ. ನವಾಜ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ‘ವಿಶ್ವದಲ್ಲಿ ನವಾಜ್ ಹೊರತು ಪಡಿಸಿ ಬೇರೆ ಯಾವ ನಾಯಕರಿಗೂ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಇಲ್ಲ’ ಎಂದು ಆರೋಪಿಸಿದ್ದಾರೆ.

‘ಯಾವುದೇ ಪ್ರಧಾನಿ ಅಥವಾ ನಾಯಕ ದೇಶದ ಹೊರಗೆ ಅಂದರೆ ವಿದೇಶಗಳಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಹೊಂದಿರುವ ಬಗ್ಗೆ ಯಾರ ಬಗ್ಗೆಯಾದರೂ ಹೇಳಿ. ನಮ್ಮ ನೆರೆಯ ದೇಶದಲ್ಲಿಯೂ ಸಹ, ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಹೊರಗೆ ಎಷ್ಟು ಆಸ್ತಿ ಹೊಂದಿದ್ದಾರೆ?. ನವಾಜ್ ವಿದೇಶದಲ್ಲಿ ಎಷ್ಟು ಆಸ್ತಿ ಹೊಂದಿದ್ದಾರೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ’ ಎಂದು ಸಾರ್ವಜನಿಕ ಸಭೆಯಲ್ಲಿ ಇಮ್ರಾನ್ ಖಾನ್ ಹೇಳಿದ್ದಾರೆ.

ಇಮ್ರಾನ್ ಖಾನ್ ಭಾರತವನ್ನು ಹೊಗಳಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ಅವರು ಭಾರತದ ವಿದೇಶಾಂಗ ನೀತಿಯನ್ನು ಶ್ಲಾಘಿಸಿದ್ದರು.

ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲವನ್ನು ಖರೀದಿಸಿದ್ದಕ್ಕಾಗಿ ಭಾರತವನ್ನು ಶ್ಲಾಘಿಸಿದ ಇಮ್ರಾನ್ ಖಾನ್, ಅವರ ಸರ್ಕಾರವು ಸ್ವತಂತ್ರ ವಿದೇಶಾಂಗ ನೀತಿಯ ಸಹಾಯದಿಂದ ಉತ್ತಮವಾಗಿ ಕೆಲಸ ಮಾಡುತ್ತಿದೆ. ಆದರೆ, ಪಾಕಿಸ್ತಾನ್ ಮುಸ್ಲಿಂ ಲೀಗ್ ನೇತೃತ್ವದ ಸರ್ಕಾರವು ‘ಆರ್ಥಿಕತೆ ಬಗ್ಗೆ ಯಾವುದೇ ನಿಯಂತ್ರಣವಿಲ್ಲದೆ ತಲೆಯಿಲ್ಲದ ಕೋಳಿಯಂತೆ ಓಡುತ್ತಿದೆ’ ಎಂದು ಟೀಕಿಸಿದ್ದರು.