Home Sports ಐಪಿಎಲ್ ಹಂಗಾಮ..!; ಇಂದು ಪಂದ್ಯದಲ್ಲಿ ಮುಖಾಮುಖಿ ಆಗಲಿರೋ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು!

ಐಪಿಎಲ್ ಹಂಗಾಮ..!; ಇಂದು ಪಂದ್ಯದಲ್ಲಿ ಮುಖಾಮುಖಿ ಆಗಲಿರೋ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು!

493
0

ಟಿ-ಟ್ವೆಂಟಿ ಅಂದ್ರೇನೇ ಅದು ಬ್ಯಾಟು ಬಾಲ್ ನ ನಡುವಿನ ಹೊಡಿ ಬಡಿ ಆಟ. ಈ ಆವೃತ್ತಿಯ ಇವತ್ತಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗು ಮುಂಬೈ ಇಂಡಿಯನ್ಸ್ ತಂಡಗಳು ಮುಖಾ ಮುಖಿಯಾಗ್ತಿವೆ.

ಈ ಬಾರಿಯ ಐಪಿಎಲ್ ಸೀಸನ್ ನಲ್ಲಿ ಜಯದ ಆರಂಭದ ಬಳಿಕ ಹ್ಯಾಟ್ರಿಕ್ ಸೋಲಿನ ಆಘಾತಕ್ಕೆ ಒಳಗಾಗಿರುವ ಪಂಜಾಬ್ ಕಿಂಗ್ಸ್ ಗೆಲುವಿನ ಹಾದಿಗೆ ಮರಳುವ ತವಕದಲ್ಲಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಘಾತಕಾರಿ ಸೋಲನುಭವಿಸಿದ ಬಳಿಕ ಮುಂಬೈ ಪುಟಿದೇಳುವ ವಿಶ್ವಾಸದಲ್ಲಿದೆ. ಇನ್ನು ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಪಂಜಾಬ್ ಹಾಗು ಮುಂಬೈ ಪರಸ್ಪರ 26 ಬಾರಿ ಮುಖಾಮುಖಿಯಾಗಿದ್ದು ಮುಂಬೈ 14 ಬಾರಿ ಹಾಗು ಪಂಜಾಬ್ 12 ಬಾರಿ ಗೆಲುವು ಕಂಡಿವೆ.

ಕನ್ನಡಿಗ ಕೆ.ಎಲ್ ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಗೆಲುವಿನ ಆರಂಭ ಪಡೆದ ಬಳಿಕ ಜಯ ಅನ್ನೋದು ಮರೀಚಿಕೆಯಾಗಿದೆ. ಇದಕ್ಕೆ ಸಾಕ್ಷಿ ಕಳೆದ 3 ಪಂದ್ಯಗಳಲ್ಲಿನ ತಂಡದ ಪ್ರದರ್ಶನ. ಬಲಾಢ್ಯ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದರೂ ವೈಫಲ್ಯತೆಯನ್ನು ಕಾಣ್ತಿದೆ. ಆರಂಭಿಕ ಬ್ಯಾಟ್ಸ್ ಮನ್ ಗಳಾದ ಕನ್ನಡಿಗರಾದ, ನಾಯಕ ಕೆ.ಎಲ್ ರಾಹುಲ್ ಹಾಗು ಮಯಾಂಕ್ ಅಗರ್ವಾಲ್ ತಂಡಕ್ಕೆ ಆಸರೆಯಾದ್ರೂ, ಮಿಕ್ಕ ಬ್ಯಾಟ್ಸ್ ಮನ್ ಗಳಿಂದ ನಿರೀಕ್ಷಿತ ಪ್ರದರ್ಶನ ಹೊರಹೊಮ್ಮುತ್ತಿಲ್ಲ. ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಸ್ಥಿರ ಪ್ರದರ್ಶನ ತೋರಿದ್ದೇ ಆದಲ್ಲಿ ತಂಡದ ಗೆಲುವು ಕಷ್ಟವೇನಲ್ಲ. ಉತ್ತಮ ಆರಂಭದ ಹೊರತಾಗಿಯೂ ಮಿಡ್ಲ್ ಆರ್ಡರ್ ಬ್ಯಾಟ್ಸ್ ಮನ್ ಗಳು ತಂಡಕ್ಕೆ ಸ್ಥಿರತೆ ತೋರುತ್ತಿಲ್ಲ. ಮೊದಲ ಪಂದ್ಯದಲ್ಲಿ ಸಿಡಿಲಬ್ಬರ ಬ್ಯಾಟಿಂಗ್ ಪ್ರದರ್ಶಿಸಿದ್ದ ದೀಪಕ್ ಹೂಡ ಇಂದು ಸಿಡಿಯಬೇಕಿದೆ. ಇನ್ನು ಡೇವಿಡ್, ಶಾರುಖ್ ಖಾನ್ ಕೂಡ ಉತ್ತಮ ಪ್ರದರ್ಶನ ತೋರಿದ್ರೆ ಗೆಲುವು ಕಷ್ಟವೇನಲ್ಲ. ಫ್ಯಾಬಿಯನ್ ಅಲೆನ್ ಬದಲಿಗೆ ಕ್ರಿಸ್ ಜೋರ್ಡನ್ ಕಣಕ್ಕಿಳಿಯಬಹುದು. ಇನ್ನು ಬೇಜವಾಬ್ದಾರಿ ಆಟ ಪ್ರದರ್ಶಿಸುತ್ತಿರುವ ಪೂರನ್ ಬದಲಿಗೆ ಡೇವಿಡ್ ಮಲಾನ್ ಉತ್ತಮ ಆಯ್ಕೆಯಾಗಬಹುದು. ಇನ್ನು ನಾಯಕ ಕೆ.ಎಲ್ ರಾಹುಲ್ ವಿಶಿಷ್ಟ ದಾಖಲೆಯೊಂದಕ್ಕೆ ಪಾತ್ರರಾಗಲಿದ್ದು, ಇನ್ನೊಂದು ಸಿಕ್ಸರ್ ಸಿಡಿಸಿದ್ರೆ ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ 200 ಸಿಕ್ಸರ್ ಪೂರೈಸಿದಂತಾಗುತ್ತೆ

ಆದರೆ, ಬೌಲಿಂಗ್ ವಿಭಾಗದಲ್ಲಿ ಪಂಜಾಬ್ ತಂಡ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಮೊನಚನ್ನು ಪ್ರದರ್ಶಿಸುತ್ತಿಲ್ಲ. ಪಂಜಾಬ್ ಬೃಹತ್ ಮೊತ್ತ ಪೇರಿಸಿಯೂ ಸಹ ಆ ಮೊತ್ತವನ್ನು ರಕ್ಷಿಸಿಕೊಂಡು ಗೆಲುವು ಕಾಣಲು ಸಾಧ್ಯವಾಗ್ತಿಲ್ಲ. ಮಹಮದ್ ಶಮಿಯಂತಹ ಅನುಭವಿ ಬೌಲರ್ ಇದ್ದೂ ಕೂಡ ಪರಿಣಾಮಕಾರಿ ಎನಿಸುತ್ತಿಲ್ಲ. ಮುರುಗನ್ ಅಶ್ವಿನ್, ರಿಚರ್ಡ್ ಸನ್, ಆರ್ಷದೀಪ್ ಸಿಂಗ್ ಪರಿಣಾಮಕಾರಿಯಾದ್ರೆ ಮಾತ್ರ ಎದುರಾಳಿ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕಲು ಸಾಧ್ಯವಾಗುತ್ತದೆ. ಇನ್ನು ಇಂದಿನ ಪಂದ್ಯದಲ್ಲಿ ದುಬಾರಿಯಾಗ್ತಿರೋ ಸ್ಪಿನ್ನರ್ ಮುರುಗನ್ ಅಶ್ವಿನ್ ಅವರ ಬದಲಿಗೆ ರವಿ ಬಿಷ್ಣೋಯಿ ಕಣಕ್ಕಿಳಿಯಬಹುದು.

ಇನ್ನು ಮುಂಬೈ ಇಂಡಿಯನ್ಸ್ ಕೂಡ ಗೆಲುವು ಅನಿವಾರ್ಯ. ಬಲಿಷ್ಠ ಬೌಲಿಂಗ್ ಪಡೆ ಹೊಂದಿದ್ದೂ ಬ್ಯಾಟ್ಸ್ ಮನ್ ಗಳ ವೈಫಲ್ಯದಿಂದ ಕೈ ಸುಟ್ಟುಕೊಳ್ಳುತ್ತಿರುವ ರೋಹಿತ್ ಪಡೆ ಸ್ಟ್ರೆಂತ್ ಹಾಗು ವೀಕ್ ನೆಸ್ ನೋಡೋಣ ಬನ್ನಿ.

ಇನ್ನು ಪಂಜಾಬ್ ಗೆ ಹೋಲಿಸಿದ್ರೆ ಮುಂಬೈ ಇಂಡಿಯನ್ಸ್ ಪ್ರಬಲವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಘಾತಕಾರಿ ಸೋಲುಂಡ ಮುಂಬೈ ಪಂಜಾಬ್ ವಿರುದ್ಧ ಪುಟಿದೇಳುವ ವಿಶ್ವಾಸದಲ್ಲಿದೆ. ಆದ್ರೆ ನಾಯಕ ರೋಹಿತ್ ಶರ್ಮಾ ಹೊರತುಪಡಿಸಿ ಉಳಿದ ಬ್ಯಾಟ್ಸ್ ಮನ್ ಗಳಿಂದ ನಿರೀಕ್ಷಿತ ಮಟ್ಟದ ರನ್ ಬರುತ್ತಿಲ್ಲ. ಕಳೆದ ಆವೃತ್ತಿಯಲ್ಲಿ ಅಗತ್ಯ ಸಮಯದಲ್ಲಿ ಒಬ್ಬರಾದರೂ ತಂಡಕ್ಕೆ ಆಸರೆಯಾಗುತ್ತಿದ್ದರು. ಸ್ಲಾಗ್ ಓವರ್ ಗಳಲ್ಲಿ ರನ್ ಪ್ರವಾಹವೇ ಹರಿದು ಬರುತ್ತಿತ್ತು. ಆದ್ರೆ ಈ ಬಾರಿ ಹಾಗಾಗುತ್ತಿಲ್ಲ. ಡಿ ಕಾಕ್ ಸ್ಥಿರ ಪ್ರದರ್ಶನ ತೋರಬೇಕಿದೆ. ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ಕೀರನ್ ಪೊಲ್ಲಾರ್ಡ್ ಕೂಡ ಮಂಕಾಗಿದ್ದಾರೆ. ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ ಹಾಗು ಕೃನಾಲ್ ಪಾಂಡ್ಯ ಸಹೋದರರ ವೈಫಲ್ಯ ಮುಂಬೈ ಮಧ್ಯಮ ಕ್ರಮಾಂಕಕ್ಕೆ ಭಾರಿ ಪೆಟ್ಟು ನೀಡಿದೆ.

ಇನ್ನು ಚೆನ್ನೈನ ಚಿದಂಬರಂ ಸ್ಟೇಡಿಯಂ ಪಿಚ್ ಬೌಲರ್ ಸ್ನೇಹಿ ಪಿಚ್ ಆಗಿದೆ. ಹೀಗಾಗಿ ಮೊದಲು ಬ್ಯಾಟ್ ಮಾಡುವ ತಂಡ 180ಕ್ಕೂ ಹೆಚ್ಚು ರನ್ ಗಳಿಸಿದರೆ ಗೆಲುವು ಸುಲಭವಾಗಲಿದೆ. ಇದುವರೆಗೂ ಆಡಿದ ಪಂದ್ಯಗಳಲ್ಲಿ ಈ ಪಿಚ್ ನಲ್ಲಿ ಮೊದಲು ಬ್ಯಾಟ್ ಮಾಡಿದ ತಂಡವೇ ಹೆಚ್ಚು ಜಯ ಸಾಧಿಸಿದೆ. ಹೀಗಾಗಿ ಟಾಸ್ ಇಲ್ಲಿ ಬಹು ನಿರ್ಣಾಯಕ ಪಾತ್ರ ವಹಿಸಲಿದೆ.

ಇನ್ನು ಮುಂಬೈ ಬಲಿಷ್ಠ ಬೌಲಿಂಗ್ ಪಡೆ ಹೊಂದಿದ್ದರೂ ಬ್ಯಾಟ್ಸ್ ಮನ್ ಗಳ ವೈಫಲ್ಯ ತಂಡಕ್ಕೆ ಮುಳುವಾಗಿ ಪರಿಣಮಿಸುತ್ತಿದೆ. ಆಲ್ ರೌಂಡರ್ ಗಳಾದ ಹಾರ್ದಿಕ್ ಪಾಂಡ್ಯ ಹಾಗು ಕೃನಾಲ್ ಪಾಂಡ್ಯ ಸಹೋದರರು ಆಲ್ ರೌಂಡ್ ಆಟ ಪ್ರದರ್ಶಿಸಬೇಕಿದೆ. ಜಯಂತ್, ಬೌಲ್ಟ್ ಹಾಗು ಜಸ್ಪ್ರೀತ್ ಬೂಮ್ರಾ ಪರಿಣಾಮಕಾರಿಯಾದ್ರೆ ಮಾತ್ರ ಮುಂಬೈಗೆ ಗೆಲುವು ಕಟ್ಟಿಟ್ಟ ಬುತ್ತಿ.

Previous articleದಿನದಿಂದ ದಿನಕ್ಕೆ ರಂಗೇರಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ!
Next articleಮೊದಲು ಒತ್ತುವರಿ ತೆರವಿಗೆ ಆದೇಶ! ಈಗ ಕಟ್ಟಡಗಳ ನೆಲಸಮಕ್ಕೆ ಹೈಕೋರ್ಟ್ ಸೂಚನೆ! ಏನಿದು ಸಿಗಂದೂರು ದೇಗುಲದ ಪ್ರಕರಣ?

LEAVE A REPLY

Please enter your comment!
Please enter your name here