ರಾಣಿ ಎಲಿಜಬೆತ್ ಕಿರೀಟದಲ್ಲಿರುವ ಗ್ರೇಟ್ ಸ್ಟಾರ್ ವಜ್ರ ಹಿಂದಿರುಗಿಸುವಂತೆ ದಕ್ಷಿಣ ಆಫ್ರಿಕಾ ಒತ್ತಾಯ

ಅಂತರಾಷ್ಟ್ರೀಯ

ಕೇಪ್‍ಟೌನ್: ಬ್ರಿಟನ್ ರಾಣಿ ಎಲಿಜಬೆತ್ ನಿಧನದ ಬೆನ್ನಲ್ಲೇ ಅವರ ಕಿರೀಟದಲ್ಲಿದ್ದ ವಜ್ರದ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿದೆ. ಕಿರೀಟದ ಆಭರಣಗಳಲ್ಲಿರುವ ಕೊಹಿನೂರ್ ವಜ್ರವನ್ನು ವಾಪಸ್ ನೀಡುವಂತೆ ಈಗಾಗಲೇ ಭಾರತದಲ್ಲಿ ಅನೇಕರು ಒತ್ತಾಯಿಸಿದ್ದಾರೆ. ಇದೀಗ ರಾಣಿ ಕಿರೀಟದಲ್ಲಿರುವ ಇನ್ನೊಂದು ಪ್ರಮುಖ ವಜ್ರವನ್ನು ಮರಳಿ ನೀಡುವಂತೆ ದಕ್ಷಿಣ ಆಫ್ರಿಕಾ ತಿಳಿಸಿದೆ.

ರಾಣಿ ಎರಡನೇ ಎಲಿಜಬೆತ್ ನಿಧನದ ಬಳಿಕ, ಆಕೆಯ ಮಗ ಪ್ರಿನ್ಸ್ ಚಾಲ್ಸ್ ಬ್ರಿಟನ್ ರಾಜ ಸಿಂಹಾಸನ ಅಲಂಕರಿಸಿದ್ದು, ಈಗ 105-ಕ್ಯಾರೆಟ್ ಕೊಹಿನೂರು ವಜ್ರ ಹಾಗೂ 530.2 ಕ್ಯಾರೆಟ್ ಇರುವ ಗ್ರೇಟ್ ಸ್ಟಾರ್ ವಜ್ರ ಇರುವ ಕಿರೀಟ ಅವರ ಪತ್ನಿಯಾದ ರಾಣಿ ಕ್ಯಾಮಿಲ್ಲಾಗೆ ಹೋಗುತ್ತದೆ. ಈ ಕಿರೀಟದಲ್ಲಿರುವ ವಜ್ರವನ್ನು ವಾಪಸ್ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಕೇಳಿ ಬರುತ್ತಿದೆ.

1905ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗಣಿಗಾರಿಕೆ ಸಂದರ್ಭದಲ್ಲಿ ಗ್ರೇಟ್ ಸ್ಟಾರ್ ವಜ್ರ ಸಿಕ್ಕಿತ್ತು. ಇದು ವಿಶ್ವದ ದೊಡ್ಡ ವಜ್ರ ಎಂದೇ ಪ್ರಸಿದ್ಧಿಯನ್ನು ಪಡೆದಿದೆ. ಈ ಗ್ರೇಟ್ ಸ್ಟಾರ್ ಅನ್ನು ಆಫ್ರಿಕಾದ ವಸಾಹತುಶಾಹಿ ಆಡಳಿತಗಾರರು ಬ್ರಿಟಿಷ್ ರಾಜಮನೆತನಕ್ಕೆ ಹಸ್ತಾಂತರಿಸಿದ್ದರು. ಪ್ರಸ್ತುತ ಈ ವಜ್ರವು ರಾಣಿಗೆ ಸೇರಿದ ಕಿರೀಟದಲ್ಲಿ ಅಳವಡಿಸಲಾಗಿದೆ.

ರಾಣಿ ಎಲಿಜಬೆತ್ ನಿಧನದ ಬೆನ್ನಲ್ಲೇ ವಜ್ರವನ್ನು ಹಿಂದಿರುಗಿಸುವಂತೆ change.orgನಲ್ಲಿ ಆನ್‍ಲೈನ್ ಅಭಿಯಾನ ಪ್ರಾರಂಭವಾಗಿದೆ. ಅದಕ್ಕೆ 6,000ಕ್ಕೂ ಹೆಚ್ಚು ಜನರು ಈಗಾಗಲೇ ಸಹಿ ಹಾಕಿದ್ದಾರೆ. ವಜ್ರವನ್ನು ತಕ್ಷಣವೇ ದಕ್ಷಿಣ ಆಫ್ರಿಕಾಕ್ಕೆ ಹಿಂತಿರುಗಿಸಬೇಕು ಇದರ ಜೊತೆಗೆ ನಮ್ಮ ದೇಶದ ಮತ್ತು ಇತರ ದೇಶಗಳ ಖನಿಜಗಳು ಅವರವರ ದೇಶಕ್ಕೆ ವಾಪಸ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ

ದಕ್ಷಿಣ ಆಫ್ರಿಕಾದ ಸಂಸತ್ತಿನ ಸದಸ್ಯರಾದ ವುಯೋಲ್ವೆತು ಝುಂಗುಲಾ ಅವರು ಈ ಅಭಿಯಾನಕ್ಕೆ ಕೈಜೋಡಿಸಿದ್ದು, ಬ್ರಿಟನ್ ಮಾಡಿದ ಎಲ್ಲಾ ಹಾನಿಗಳಿಗೆ ಪರಿಹಾರ ಹಾಗೂ ಬ್ರಿಟನ್ ಕದ್ದ ಎಲ್ಲಾ ಚಿನ್ನ, ವಜ್ರಗಳನ್ನು ಹಿಂದಿರುಗಿಸಬೇಕು ಎಂದು ಒತ್ತಾಯಿಸಿ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಾರೆ. ಲಂಡನ್ ಟವರ್‍ನಲ್ಲಿರುವ ಜ್ಯುವೆಲ್ ಹೌಸ್‍ನಲ್ಲಿ ವಜ್ರವನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ.