ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ ಕನ್ನಡಿಗ ರಾಬಿನ್ ಉತ್ತಪ್ಪ..!

ಕ್ರೀಡೆ

ಕನ್ನಡಿಗ, ಟೀಂ ಇಂಡಿಯಾ ಕ್ರಿಕೆಟಿಗ ರಾಬಿನ್ ಉತ್ತಪ್ಪ ಎಲ್ಲಾ ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದಾರೆ. ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಕೊಡಗಿನ ಬ್ಯಾಟರ್‌, 36 ವರ್ಷದ ರಾಬಿನ್ ಉತ್ತಪ್ಪ ವಿದೇಶಿ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪತ್ರ ಬರೆದು ಅವಕಾಶ ನೀಡಿದ್ದಕ್ಕೆ ಬಿಸಿಸಿಐ, ಕರ್ನಾಟಕ, ಸೌರಾಷ್ಟ್ರ, ಕೇರಳ ಕ್ರಿಕೆಟ್‌ ಬೋರ್ಡ್‌ಗೆ ಧನ್ಯವಾದ ಹೇಳಿದ್ದಾರೆ. 2006ರಲ್ಲಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದರ್ಪಣೆ ಮಾಡಿದ್ದ ರಾಬಿನ್‌ ಉತ್ತಪ್ಪ ವಿಕೆಟ್ ಕೀಪರ್ ಆಗಿ ಟೀಂ ಇಂಡಿಯಾದಲ್ಲಿ ಮಿಂಚಿದ್ದರು. 2007ರ ಟಿ20 ವಿಶ್ವಕಪ್ ಚಾಂಪಿಯನ್ ತಂಡದ ಸದಸ್ಯರಾಗಿದ್ದರು. 2015ರ ಬಳಿಕ ಟೀಂ ಇಂಡಿಯಾದಲ್ಲಿ ಅವಕಾಶ ವಂಚಿತರಾಗಿದ್ದ ರಾಬಿನ್ ಉತ್ತಪ್ಪ, ಐಪಿಎಲ್ ಹಾಗೂ ರಣಜಿ ಕ್ರಿಕೆಟ್ ಆಡುತ್ತಿದ್ದರು.

ಫಿಟ್ನೆಸ್ ಸಮಸ್ಯೆ, ಗಾಯ ಹಾಗೂ ಫಾರ್ಮ್ ಸಮಸ್ಯೆಯಿಂದ ಅವಕಾಶ ವಂಚಿತರಾಗಿದ್ದ ರಾಬಿನ್ ಉತ್ತಪ್ಪ 2015ರಲ್ಲಿ ಜಿಂಬಾಬ್ವೆ ವಿರುದ್ಧ ಕೊನೆಯ ಬಾರಿಗೆ ಟಿ20 ಹಾಗೂ ಏಕದಿನ ಪಂದ್ಯ ಆಡಿದ್ದರು. ಬಳಿಕ ಟೀಂ ಇಂಡಿಯಾದಿಂದ ದೂರ ಉಳಿದಿದ್ದರು. 46 ಏಕದಿನ ಪಂದ್ಯಗಳ 42 ಇನ್ನಿಂಗ್ಸ್‌ ಆಡಿ 934 ರನ್‌ ಹೊಡೆದಿದ್ದಾರೆ. 13 ಟಿ 20 ಪಂದ್ಯ ಆಡಿರುವ ಉತ್ತಪ್ಪ 12 ಇನ್ನಿಂಗ್ಸ್‌ಗಳಿಂದ 249 ರನ್‌ ಗಳಿಸಿದ್ದಾರೆ. 203 ಪ್ರಥಮ ದರ್ಜೆ ಪಂದ್ಯಗಳಿಂದ 6,534 ರನ್‌ ಹೊಡೆದಿದ್ದಾರೆ.