ಬಳಕೆಯಾಗದ ಅಂಬೇಡ್ಕರ್ ಭವನ ಗ್ರಾಮ ಗ್ರಂಥಾಲಯ’ಗಳಾಗಿ ಪರಿವರ್ತನೆ: ಸಚಿವ ಕೋಟ ಶ್ರೀನಿವಾಸ

ಬೆಂಗಳೂರು

ಬೆಂಗಳೂರು: ಬಳಕೆಯಾಗದ ಅಂಬೇಡ್ಕರ್ ಭವನಗಳು ಗ್ರಾಮ ಗ್ರಂಥಾಲಯ’ಗಳನ್ನಾಗಿ ಪರಿವರ್ತಿಸಲು ಕ್ರಮ ವಹಿಸಲಾಗುವುದು’ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‍ನ ಹಿರಿಯ ಸದಸ್ಯಎ.ಟಿ.ರಾಮಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು,’ಅಂಬೇಡ್ಕರ್ ಭವನಗಳನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಗ್ರಂಥಾಲಯಗಳನ್ನಾಗಿ ಪರಿವರ್ತನೆ ಮಾಡುವ ಕಾರ್ಯವನ್ನು ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು.

ಅಪೂರ್ಣಗೊಂಡಿರುವ ಅಂಬೇಡ್ಕರ್ ಭವನಗಳನ್ನು ಪೂರ್ಣಗೊಳಿಸಲು ಅನುದಾನದ ಕೊರತೆ ಇಲ್ಲ’ ಎಂದು ಸ್ಪಷ್ಟಪಡಿಸಿದರು. ಅರಕಲಗೂಡು ಕ್ಷೇತ್ರದಲ್ಲಿ 2012-13ನೆ ಸಾಲಿನಲ್ಲಿ ಒಟ್ಟು 25 ಭವನಗಳನ್ನು ಮಂಜೂರು ಮಾಡಿದ್ದು, 18 ಭವನಗಳನ್ನು ಪೂರ್ಣಗೊಳಿಸಿದ್ದು, ಇನ್ನೂ ಭವನ ನಿರ್ಮಾಣ ಪ್ರಗತಿಯಲ್ಲಿದೆ. ಒಂದು ಭವನ ನಿರ್ಮಾಣಕ್ಕೆ ನಿವೇಶನದ ಸಮಸ್ಯೆ ಇದೆ. ಹೀಗಾಗಿ ನಿವೇಶನ ಒದಗಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದು, ನಿವೇಶನ ಸಿಕ್ಕರೆ ಕೂಡಲೇ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಭರವಸೆ ನೀಡಿದರು.