ವೈದ್ಯಲೋಕಕ್ಕೆ ಅಚ್ಚರಿ: ಒಂದು ವಾರದ ಅಂತರದಲ್ಲಿ 2 ಕರುಗಳಿಗೆ ಜನ್ಮ ನೀಡಿದ ಎಮ್ಮೆ.!

ಜಿಲ್ಲೆ

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಅಪರೂಪದಲ್ಲಿಯೇ ಅಪರೂಪ ಎಂಬಂತ ಪ್ರಕರಣವೊಂದಕ್ಕೆ ಸಾಕ್ಷಿಯಾಗಿದೆ. ಅಷ್ಟೆ ಅಲ್ಲದೆ, ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಇದಕ್ಕೆ ಕಾರಣವಾಗಿರುವುದು ಒಂದು ಎಮ್ಮೆ. ಹೌದು, ಇಲ್ಲಿನ ನಾಡಕಲಸಿ ಗ್ರಾಮದ ಎಮ್ಮೆಯೊಂದು ಒಂದು ವಾರದ ಅಂತರದಲ್ಲಿಎರಡು ಕರುಗಳಿಗೆ ಜನ್ಮಕೊಟ್ಟಿದೆ.

ಕಳೆದ ಸೆಪ್ಟೆಂಬರ್ 13 ರಂದು ಮೊದಲ ಕರುಗೆ ಜನ್ಮಕೊಟ್ಟಿದ್ದ ಎಮ್ಮೆ, ಬಳಿಕ ವಾರ ಬಿಟ್ಟು ಗುಡ್ಡಕ್ಕೆ ಮೇಯಲು ಹೋದಾಗ ಮತ್ತೊಂದು ಕರುಗೆ ಜನ್ಮ ನೀಡಿದೆ. ಸಾಮಾನ್ಯವಾಗಿ ಅವಳಿ ಕರುಗಳಾದರೆ, ಒಟ್ಟಿಗೆ ಕೆಲವು ನಿಮಿಷಗಳು ಅಥವಾ ಗಂಟೆಗಳ ಅಂತರದಲ್ಲಿ ಹುಟ್ಟುತ್ತವೆ. ಆದರೆ, ಇಲ್ಲಿ ವಾರಗಳ ಅಂತರದಲ್ಲಿ ಎರಡು ಕರುಗಳು ಹುಟ್ಟಿರುವುದಕ್ಕೆ ಪ್ರತ್ಯೇಕವಾಗಿ ಗರ್ಭಕಟ್ಟಿರುವುದು ಕಾರಣ ಎನ್ನಲಾಗುತ್ತಿದೆ.

ಹೀಗೂ ಆಗುತ್ತಾ?

ಸ್ಥಳೀಯ ಪಶುಪಾಲಕರ ಪ್ರಕಾರ, ಎಮ್ಮೆಯು ಬೆದೆಗೆ ಬಂದು ಮೊದಲು ಒಂದು ಗರ್ಭ ಕಟ್ಟಿದೆ. ಆನಂತರ ಮತ್ತೊಮ್ಮೆ ಕೋಣದ ಸಂಪರ್ಕ ಕ್ಕೆ ಬಂದು ಇನ್ನೊಂದು ಸರ್ತಿ ಗರ್ಭ ಕಟ್ಟಿದೆ. ನೈಸರ್ಗಿಕ ಗರ್ಭಧಾರಣೆಯಲ್ಲಿ ಹೀಗೆ ಆಗುವ ಸಾಧ್ಯತೆ ಇದೆ. ಆದರೆ ತೀರ ಅಪರೂಪ. ವಿಭಿನ್ನ ಸಂದರ್ಭದಲ್ಲಿ ಗರ್ಭ ಕಟ್ಟಿದ ಹಿನ್ನೆಲೆಯಲ್ಲಿ ಬೇರೆ ಬೇರೆ ಆಗಿ ಅವಳಿ ಕರುಗಳು ಹುಟ್ಟಿವೆ ಎನ್ನುತ್ತಿದ್ದಾರೆ. ಇನ್ನೂ ಈ ಕರುಗಳನ್ನು ನೋಡಲು ಹಲವಾರು ಮಂದಿ ಬರುತ್ತಿದ್ದು, ತಜ್ಞರು ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳುತ್ತಿದ್ದಾರೆ.